ಇಂಡಿಯಾದ ದಿಟ್ಟ ಹೋರಾಟದ ಮುಂದೆ ಬಾಡಿದ ಕಮಲ ; ಎನ್ ಡಿಎ ಗೆ ಬಹುಮತ

ಏಕೈಕ ಪಕ್ಷವಾಗಿ ಬಹುಮತ ಪಡೆಯಲು ಬಿಜೆಪಿ ವಿಫಲ | ಉತ್ತರಪ್ರದೇಶದಲ್ಲಿ ಬಿಜೆಪಿ ಭದ್ರಕೋಟೆ ಭೇದಿಸಿದ ಇಂಡಿಯಾ ಮಹಾರಾಷ್ಟ್ರದಲ್ಲಿ ಫಲಿಸಿದ ‘ಮಹಾಮೈತ್ರಿ’ | ಅಯೋಧ್ಯೆಯಲ್ಲಿ ಕಮಲಕ್ಕೆ ಸೋಲು

Update: 2024-06-04 16:51 GMT

PC : ANI 

ಹೊಸದಿಲ್ಲಿ : 18ನೇ ಲೋಕಸಭಾ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬಿಜೆಪಿಗೆ ಭರ್ಜರಿ ಬಹುಮತದ ಭವಿಷ್ಯ ನುಡಿದಿದ್ದ ಎಲ್ಲಾ ಮತದಾನೋತ್ತರ ಸಮೀಕ್ಷೆಗಳನ್ನು ಬುಡಮೇಲುಗೊಳಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಅತ್ಯಧಿಕ ಸ್ಥಾನಗಳನ್ನು ಪಡೆದಿದ್ದರೂ, 300ರ ಗಡಿಯನ್ನು ದಾಟಲು ವಿಫಲವಾಗಿದೆ. ಇಂಡಿಯಾ ಮೈತ್ರಿಕೂಟದ ಬಲಿಷ್ಠ ಹೋರಾಟಕ್ಕೆ ಬೆಚ್ಚಿಬಿದ್ದಿರುವ ಬಿಜೆಪಿ ಅಧಿಕಾರವುಳಿಸಿಕೊಳ್ಳಲು ಹರಸಾಹಸ ನಡೆಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. 400 ಸ್ಥಾನಗಳನ್ನು ಪಡೆಯುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕನಸು ನುಚ್ಚುನೂರಾಗಿದೆ.

ಲೋಕಸಭೆಯ 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು 291 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು 234 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ, 241 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆಯಾದರೂ, ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಸರಕಾರ ರಚಿಸಿದರೂ, ಮಿತ್ರ ಪಕ್ಷಗಳ ಹಂಗಿನಲ್ಲೇ ಆಡಳಿತ ನಡೆಸಬೇಕಾದ ಅನಿವಾರ್ಯತೆ ಅದಕ್ಕೆ ಎದುರಾಗಿದೆ. ಎನ್ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಹಾಗೂ ನಿತೀಶ್ ಕುಮಾರ್ ಅವರ ಜೆಡಿಯು ನೂತನ ಎನ್ಡಿಎ ಸರಕಾರದ ರಚನೆಯಲ್ಲಿ ಕಿಂಗ್ ಮೇಕರ್ ಆಗಲಿವೆ.

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಭಾರೀ ಆಘಾತ ಎದುರಾಗಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 32 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರವೇ ಅದು ಸಫಲವಾಗಿದೆ. ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು 44 ಸ್ಥಾನಗಳನ್ನು ಪಡೆದಿದ್ದು, ಬಿಜೆಪಿಯ ಗೆಲುವಿನ ಓಟಕ್ಕೆ ಕಡಿವಾಣ ಹಾಕಿವೆ. 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳನ್ನು ಧೂಳೀಪಟಗೊಳಿಸಿದ್ದ ಬಿಜೆಪಿಗೆ ಈ ಸಲ ಭಾರೀ ಮುಖಭಂಗವಾಗಿದೆ.

ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷವು ಹೀನಾಯ ಸೋಲುಕಂಡಿದ್ದು, ಅಲ್ಲಿ ಬಿಜೆಪಿ ಎಲ್ಲಾ 7 ಸ್ಥಾನಗಳನ್ನು ಗೆದ್ದುಕೊಂಡಿದೆ.

ಸಂದೇಶಖಾಲಿ ಹಿಂಸಾಚಾರ ಸೇರಿದಂತೆ ರಾಜಕೀಯ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಪಶ್ಚಿಮಬಂಗಾಳದಲ್ಲಿಯೂ ಬಿಜೆಪಿಗೆ ಭಾರೀ ನಿರಾಸೆ ಎದುರಾಗಿದೆ. 2019ನೇ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಕಳಪೆ ಸಾಧನೆ ಮಾಡಿರುವ ಬಿಜೆಪಿ ಕೇವಲ 12 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಟಿಎಂಸಿ 31 ಸ್ಥಾನಗಳೊಂದಿಗೆ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಮೆರೆದಿದೆ.

ಕಳೆದ ಕೆಲವು ವರ್ಷಗಳಿಂದ ನಾಟಕೀಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನಾ(ಶಿಂಧೆ ಬಣ) ಮೈತ್ರಿಯು ಇಂಡಿಯಾ ಮೈತ್ರಿಕೂಟದ ಪ್ರಬಲ ಸವಾಲಿಗೆ ತತ್ತರಿಸಿದೆ.ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 30ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಿದೆ, ಇಲ್ಲವೇ ಮುನ್ನಡೆ ಸಾಧಿಸಿದೆ.

ಆದರೆ ತನ್ನ ಭದ್ರಕೋಟೆಗಳಲ್ಲಿ ಸಾಲುಸಾಲಾಗಿ ಹಿನ್ನಡೆ ಕಂಡ ಬಿಜೆಪಿಗೆ ಒಡಿಶಾ,ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ ಗೆಲುವು ತುಸು ಸಾಂತ್ವನ ನೀಡಿವೆ. ಕೇರಳದಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆದಿದೆ.

ಆಂಧ್ರಪ್ರದೇಶದಲ್ಲಿ ಎನ್ಡಿಎ ಮೈತ್ರಿಕೂಟದ ಅಂಗಪಕ್ಷವಾದ ಚಂದ್ರಬಾಬು ನಾಯ್ಡು ನೇತೃತ್ವದ ಪ್ರಚಂಡ ಗೆಲುವನ್ನು ದಾಖಲಿಸಿದ್ದು, 16 ಸ್ಥಾನಗಳಲ್ಲಿ ಗೆಲುವು ಕಂಡಿದೆ.ತನ್ನ ಸಾಂಪ್ರದಾಯಿಕ ಭದ್ರಕೋಟೆಗಳಾದ ಮಧ್ಯಪ್ರದೇಶ,ಉತ್ತರಾಖಂಡ, ದಿಲ್ಲಿ, ಗುಜರಾತ್ , ಚತ್ತೀಸ್ಗಡ ರಾಜ್ಯಗಳಲ್ಲಿ ಪ್ರಚಂಡ ಜಯಭೇರಿ ಬಾರಿಸಿದೆ. ರೈತ ಚಳವಳಿಯ ಕೇಂದ್ರ ಬಿಂದುವಾಗಿದ್ದ ಪಂಜಾಬ್ನಲ್ಲಿ ಕಾಂಗ್ರೆಸ್ ಆಧಿಪತ್ಯ ಮೆರೆದರೆ, ರಾಜಸ್ತಾನದಲ್ಲಿ ಬಿಜೆಪಿ 14 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಇತ್ತ ಬಿಹಾರದಲ್ಲಿಯೂ ಇಂಡಿಯಾ ಮೈತ್ರಿಕೂಟವು, ಬಿಜೆಪಿ-ಆರ್ಜೆಡಿ ಮೈತ್ರಿಯ ಪ್ರಾಬಲ್ಯವನ್ನು ಮಣಿಸುವಲ್ಲಿ ಯಶಸ್ವಿಯಾಗಿವೆ.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಸರಣಿ ಸೋಲುಗಳನ್ನು ಕಂಡಿದ್ದ ಕಾಂಗ್ರೆಸ್ ಪಕ್ಷವು ಈ ಚುನಾವಣೆಯಲ್ಲಿ 100 ಸ್ಥಾನಗಳ ಗಡಿಯನ್ನು ದಾಟುವ ಸಾಧ್ಯತೆಯಿದೆ.

ಈ ಚುನಾವಣಾ ಫಲಿತಾಂಶವು ಎಲ್ಲಾ ಮತದಾನೋತ್ತರ ಸಮೀಕ್ಷೆಗಳನ್ನು ಬುಡಮೇಲು ಮಾಡಿವೆ. ಬಹುತೇಕ ಚುನಾವಣಾ ಸಮೀಕ್ಷೆಗಳು ಎನ್ಡಿಎಗೆ 350ಕ್ಕೂ ಅಧಿಕ ಸ್ಥಾನಗಳನ್ನು ನೀಡಿದ್ದವು. ಆದರೆ ಮತದಾರ ಈ ಎಲ್ಲಾ ಸಮೀಕ್ಷೆಗಳನ್ನು ಬುಡಮೇಲುಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News