ಪನ್ನೀರ್ ಸೆಲ್ವಂ ಖುಲಾಸೆಗೊಂಡ ಭ್ರಷ್ಟಾಚಾರ ಪ್ರಕರಣ ವಿಚಾರಣೆ ಮರು ಆರಂಭಿಸಿದ ಮದ್ರಾಸ್ ಹೈಕೋರ್ಟ್
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ.ಪಿ. ಒ.ಪನ್ನೀರ್ ಸೆಲ್ವಂ ಅವರು 2012ರಲ್ಲಿ ಖುಲಾಸೆಗೊಂಡ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಗುರುವಾರ ಮರು ಆರಂಭಿಸಿದೆ.
ನ್ಯಾಯಾಲಯ ನೀಡಿದ ನೋಟಿಸಿಗೆ ಸೆಪ್ಟಂಬರ್ 27ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಪನ್ನೀರ್ ಸೆಲ್ವಂ ಹಾಗೂ ತಮಿಳುನಾಡು ಜಾಗೃತ ಹಾಗೂ ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯಕ್ಕೆ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಸೂಚನೆ ನೀಡಿದ್ದಾರೆ.
ನ್ಯಾಯಮೂರ್ತಿ ವೆಂಕಟೇಶ್ ಅವರು ಖುಲಾಸೆಗೊಂಡ ರಾಜಕೀಯ ನಾಯಕರ ಪ್ರಕರಣದ ಮರು ವಿಚಾರಣೆ ಆರಂಭಿಸುತ್ತಿರುವುದು ಕಳೆದ ಕೆಲವು ವಾರಗಳಲ್ಲಿ ಇದು ನಾಲ್ಕನೇ ದೃಷ್ಟಾಂತ. ವೆಂಕಟೇಶ್ ಅವರು ತಮಿಳುನಾಡಿನ ಸಂಸದರು ಹಾಗೂ ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ಎಲ್ಲಾ ನ್ಯಾಯಾಲಯಗಳ ಉಸ್ತುವಾರಿ ನ್ಯಾಯಾಧೀಶರಾಗಿದ್ದಾರೆ.
ಪನ್ನೀರ್ ಸೆಲ್ವಂ ಅವರು 2001 ಹಾಗೂ 2006ರ ನಡುವೆ ತಮಿಳುನಾಡಿನ ಕಂದಾಯ ಸಚಿವರಾಗಿದ್ದಾಗ ಹಾಗೂ 2001 ಹಾಗೂ 2002ರ ನಡುವೆ ಮುಖ್ಯಮಂತ್ರಿಯಾಗಿದ್ದಾಗ ನಡೆದ ಭ್ರಷ್ಟಾಚಾರದ ಪ್ರಕರಣ ಇದಾಗಿದೆ.