ಅಮೆರಿಕದಲ್ಲಿ ಆಶ್ರಯ ಕೋರಿದ ಭಾರತೀಯರ ಸಂಖ್ಯೆ ಶೇಕಡ 855ರಷ್ಟು ಹೆಚ್ಚಳ
ಅಹ್ಮದಾಬಾದ್: ಅಮೆರಿಕದಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ ಭಾರತೀಯರ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಆಶ್ರಯ ಕೋರಿದ ಭಾರತೀಯರ ಸಂಖ್ಯೆ ಶೇಕಡ 855ರಷ್ಟು ಏರಿಕೆ ಕಂಡಿದೆ. ಇದು ಅಮೆರಿಕದಲ್ಲಿ ವಾಸಿಸುವ ಭಾರತೀಯರ ಕನಸನ್ನು ಪ್ರತಿಫಲಿಸುತ್ತದೆ. 2021ನೇ ಹಣಕಾಸು ವರ್ಷದಲ್ಲಿ ಅಮೆರಿಕದಲ್ಲಿ ಆಶ್ರಯ ಕೋರಿದ ಭಾರತೀಯರ ಸಂಖ್ಯೆ 4330 ಇದ್ದರೆ, 2023ನೇ ಹಣಕಾಸು ವರ್ಷದಲ್ಲಿ ಇದು ಶೇಕಡ 855ರಷ್ಟು ಹೆಚ್ಚಳ ಕಂಡು 41330ಕ್ಕೇರಿದೆ ಎಂಬ ಅಂಶ ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಈ ಪೈಕಿ ಶೇಕಡ 50ಕ್ಕಿಂತಲೂ ಹೆಚ್ಚು ಮಂದಿ ಗುಜರಾತಿಗಳು ಎನ್ನುವುದು ಭಾರತೀಯ ಏಜೆನ್ಸಿಗಳಿಂದ ತಿಳಿದು ಬಂದಿದೆ.
ರಕ್ಷಣಾತ್ಮಕ ಆಶ್ರಯ ಬಯಸಿದವರಲ್ಲಿ ಭಾರತೀಯರು ಐದನೇ ಅತಿದೊಡ್ಡ ಗುಂಪಾಗಿದ್ದು, ದೃಢ ಆಶ್ರಯ ಕೋರಿದವರಲ್ಲಿ ಭಾರತೀಯರು ಏಳನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ 5340 ಮಂದಿ ಭಾರತೀಯರು ಆಶ್ರಯ ಪಡೆದಿದ್ದಾರೆ ಎಂದು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಲಾದ ಅಸಿಲೀಸ್ ವಾರ್ಷಿಕ ಹರಿವು ವರದಿ ಹೇಳಿದೆ.
2021ರಲ್ಲಿ ಸಲ್ಲಿಕೆಯಾದ 4330 ಅರ್ಜಿಗಳ ಪೈಕಿ ಅಮೆರಿಕದ ಪೌರತ್ವಕ್ಕೆ ಸಲ್ಲಿಸಿದ ದೃಢ ಅರ್ಜಿಗಳು (2090) ಮತ್ತು ಇಮಿಗ್ರೇಷನ್ ಸರ್ವೀಸಸ್ ಮತ್ತು ಡಿಫೆನ್ಸಿವ್ (2240) ಅರ್ಜಿಗಳು ಸೇರಿವೆ. ಮರು ವರ್ಷ ಈ ಅರ್ಜಿಗಳ ಸಂಖ್ಯೆ 14570ಕ್ಕೇರಿದ್ದು, ಮೂರು ಪಟ್ಟು ಹೆಚ್ಚಳ ಕಂಡಿದೆ. ದೃಢ ಹಾಗೂ ರಕ್ಷಣಾತ್ಮಕ ಅರ್ಜಿಗಳ ಸಂಖ್ಯೆ ಕ್ರಮವಾಗಿ 5370 ಮತ್ತು 9200ಕ್ಕೆ ಏರಿತು. 2023ನೇ ಹಣಕಾಸು ವರ್ಷದಲ್ಲಿ ಅಮೆರಿಕದ ಆಶ್ರಯ ಬೇಡಿದ ಭಾರತೀಯರ ಸಂಖ್ಯೆಯಲ್ಲಿ ಮತ್ತೆ 3 ಪಟ್ಟು ಏರಿಕೆ ಕಂಡು 41300ಕ್ಕೇರಿದೆ.
2021ನೇ ಹಣಕಾಸು ವರ್ಷದಲ್ಲಿ 1330 ಮಂದಿಗೆ ಆಶ್ರಯ ನೀಡಲಾಗಿದ್ದು, 2022ರಲ್ಲಿ ಇದು ಮೂರು ಪಟ್ಟು ಹೆಚ್ಚಿ 4260ಕ್ಕೇರಿದೆ. ಈ ಏರಿಕೆ ಪ್ರವೃತ್ತಿ 2023ರಲ್ಲೂ ಮುಂದುವರಿದಿದ್ದು, 5340 ಮಂದಿ ಆಶ್ರಯ ಪಡೆದಿದ್ದಾರೆ. ಆಸರೆ ಪಡೆದ ಒಟ್ಟು ಜನಸಂಖ್ಯೆಯ ಪೈಕಿ ಭಾರತೀಯರು ಐದನೇ ಸ್ಥಾನದಲ್ಲಿದ್ದಾರೆ.