ಬಿಎಮ್‌ಡಬ್ಯ್ಲುಕಾರ್ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೃತ್ಯು | ಶಿವಸೇನೆ ಉಪನಾಯಕ ಹುದ್ದೆಯಿಂದ ಆರೋಪಿಯ ತಂದೆ ವಜಾ

Update: 2024-07-10 13:30 GMT

ಮಿಹಿರ್ ಶಾ | PC : PTI 

ಮುಂಬೈ : ವರ್ಲಿಯಲ್ಲಿ ತನ್ನ ಬಿಎಮ್‌ಡಬ್ಯ್ಲು ಕಾರ್ ಹರಿಸಿ ಬೈಕೊಂದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸಾವಿಗೆ ಕಾರಣನಾಗಿರುವ ಮಿಹಿರ್ ಶಾನ ತಂದೆ ರಾಜೇಶ್ ಶಾರನ್ನು ಶಿವಸೇನೆಯ ಉಪನಾಯಕ ಹುದ್ದೆಯಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬುಧವಾರ ವಜಾಗೊಳಿಸಿದ್ದಾರೆ.

ರವಿವಾರ ಮಿಹಿರ್ ಶಾ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದು 45 ವರ್ಷದ ಮಹಿಳೆ ಕಾವೇರಿ ನಖ್ವ ಸಾವಿಗೀಡಾಗಿದ್ದಾರೆ.

ಘಟನೆ ನಡೆದ ಎರಡು ದಿನಗಳ ಬಳಿಕ, ಮಂಗಳವಾರ ಮುಂಬೈ ಪೊಲೀಸರು ಮಿಹಿರ್ ಶಾನನ್ನು ವಿರಾರ್‌ನಲ್ಲಿ ಬಂಧಿಸಿದ್ದಾರೆ. ಅಪಘಾತ ನಡೆಸಿದ ಬಳಿಕ ಅವನು ತಲೆತಪ್ಪಿಸಿಕೊಂಡಿದ್ದನು. ಅವನನ್ನು ಬಂಧಿಸಲು ಪೊಲೀಸರು 14 ತಂಡಗಳನ್ನು ರಚಿಸಿದ್ದರು.

ಪೊಲೀಸರು ರಾಜೇಶ್ ಶಾ ಮತ್ತು ಅವರ ಚಾಲಕ ರಾಜ್‌ರಿಷಿ ಸಿಂಗ್ ಬಿದಾವತ್‌ರನ್ನೂ ಬಂಧಿಸಿದ್ದಾರೆ. ಅಪಘಾತ ನಡೆದ ಸಂದರ್ಭದಲ್ಲಿ ಚಾಲಕ ರಾಜ್ ರಿಷಿ ಸಿಂಗ್ ಕಾರಿನಲ್ಲಿ ಇದ್ದರು ಎನ್ನಲಾಗಿದೆ. ಬಳಿಕ ರಾಜೇಶ್ ಶಾಗೆ ಮುಂಬೈ ನ್ಯಾಯಾಲಯವೊಂದು ಜಾಮೀನು ನೀಡಿದೆ.

ರಾಜೇಶ್ ಶಾ ಶಿವಸೇನೆಯ ಏಕನಾಥ ಶಿಂದೆ ಬಣದ ಪಾಲ್ಘಾರ್ ಘಟಕದ ನಾಯಕರಾಗಿದ್ದಾರೆ. ಅವರನ್ನು ಈಗ ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ.

‘‘ಪ್ರಕರಣದ ಆರೋಪಿಯನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. ಇದು ಸಾಮಾನ್ಯ ಹಿಟ್-ಆ್ಯಂಡ್-ರನ್ ಪ್ರಕರಣವಲ್ಲ. ಇದು ಪುಣೆಯಲ್ಲಿ ನಡೆದಂಥದೇ ಪ್ರಕರಣವಾಗಿದೆ’’ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಬಣದ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಆರೋಪಿ ಮದ್ಯಪಾನ ಮಾಡಿದ ಬಾರ್ ಧ್ವಂಸ!

ಕಾರು ಢಿಕ್ಕಿ ಹೊಡೆಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾಗಿರುವ ಶಿವಸೇನಾ ನಾಯಕರೊಬ್ಬರ ಮಗ ಮಿಹಿರ್ ಶಾನಿಗೆ ಮದ್ಯ ಪೂರೈಸಿದ ಬಾರನ್ನು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ (ಬಿಎಮ್‌ಸಿ) ಬುಧವಾರ ಧ್ವಂಸಗೊಳಿಸಿದೆ.

ಅಪಘಾತ ನಡೆಸುವ ಕೆಲವೇ ಗಂಟೆಗಳ ಮೊದಲು ಆರೋಪಿಯು ಜುಹು ಉಪನಗರದಲ್ಲಿರುವ ಬಾರ್‌ನಲ್ಲಿ ಮದ್ಯ ಸೇವಿಸಿದ್ದನು ಎನ್ನಲಾಗಿದೆ. ಬಳಿಕ, ಮದ್ಯದ ಅಮಲಿನಲ್ಲಿ ತನ್ನ ಬಿಎಮ್‌ಡಬ್ಲ್ಯು ಕಾರು ಚಲಾಯಿಸಿ ಸ್ಕೂಟರೊಂದಕ್ಕೆ ಢಿಕ್ಕಿ ಹೊಡೆದು ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎನ್ನಲಾಗಿದೆ.

ಆರೋಪಿಯ ಮನೆ ಮೇಲೆ ಬುಲ್‌ಡೋಝರ್ ಹರಿಸಿ: ಆದಿತ್ಯ ಠಾಕ್ರೆ

ಆರೋಪಿ ಮಿಹಿರ್ ಶಾ ಮತ್ತು ಆತನ ತಂದೆ ರಾಜೇಶ್ ಶಾ ಮನೆ ಮೇಲೆ ಬುಲ್‌ಡೋಝರ್ ಹರಿಸಿ ‘‘ಬುಲ್‌ಡೋಝರ್ ನ್ಯಾಯ’’ ಯಾಕೆ ನೀಡುವುದಿಲ್ಲ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ಪ್ರಶ್ನಿಸಿದ್ದಾರೆ.

ಅಪಘಾತ ನಡೆಸಿ ಪರಾರಿಯಾದ ಪ್ರಕರಣದ ಸಂತ್ರಸ್ತೆಯ ಪತಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ಠಾಕ್ರೆ, ‘‘ಅದು ಅಪಘಾತವಲ್ಲ, ಕೊಲೆ’’ ಎಂದು ಹೇಳಿದರು. ‘‘ಹಿಟ್ ಆ್ಯಂಡ್ ರನ್ ಪ್ರಕರಣ ಇದಲ್ಲ. ಅವರು ಮಹಿಳೆಯನ್ನು ಒಂದೂವರೆ ಕಿಲೋಮೀಟರ್ ದೂರ ಕಾರಿನಡಿಯಲ್ಲಿ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಕಾರನ್ನು ಹಿಂದಕ್ಕೆ ತೆಗೆಯುವಾಗ ಮತ್ತೊಮ್ಮೆ ಕಾರು ಸಂತ್ರಸ್ತೆಯ ಮೇಲೆ ಹರಿದಿದೆ. ಹಾಗಾಗಿ, ಅದು ಕೊಲೆ’’ ಎಂದು ಅವರು ಹೇಳಿದರು.

‘‘ಮಿಹಿರ್ ಶಾನಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ನೀವು ಬುಲ್‌ಡೋಝರ್ ನ್ಯಾಯ ನೀಡುವುದಾದರೆ, ಆರೋಪಿಯ ಮನೆಯ ಮೇಲೆ ಬುಲ್‌ಡೋಝರ್ ಕೊಂಡು ಹೋಗಿ’’ ಎಂದು ಅವರು ಹೇಳಿದರು.

ಆರೋಪಿಗೆ ಜು. 16ರವರೆಗೆ ಪೊಲೀಸ್ ಕಸ್ಟಡಿ

ಬಿಎಮ್‌ಡಬ್ಲ್ಯು ಕಾರ್ ಹಿಟ್ ಆ್ಯಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಮುಂಬೈನ ಸ್ಥಳೀಯ ನ್ಯಾಯಾಲಯವೊಂದು ಬುಧವಾರ ಜುಲೈ 16ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಘಟನೆಯ ಬಳಿಕ, ಆರೋಪಿಗೆ ಎಷ್ಟು ಮಂದಿ ಸಹಾಯ ಮಾಡಿದ್ದಾರೆ ಮತ್ತು ಮೂರು ದಿನಗಳ ಕಾಲ ಅಡಗಿಕೊಳ್ಳಲು ಯಾರು ನೆರವು ನೀಡಿದ್ದಾರೆ ಎನ್ನುವುದನ್ನು ಕಂಡುಕೊಳ್ಳಬಹುದಾಗಿದೆ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಯು ಕಾರು ಚಾಲನಾ ಪರವಾನಿಗೆಯನ್ನು ಹೊಂದಿರುವನೇ ಎನ್ನುವುದನ್ನೂ ಪತ್ತೆಹಚ್ಚಬೇಕಾಗಿದೆ ಎಂದು ಪೊಲೀಸರು ತಿಳಿಸಿದರು.

ಘಟನೆಯ ಬಳಿಕ ಆರೋಪಿಯು ಬಿಸಾಡಿದ ಕಾರಿನ ನಂಬರ್ ಪ್ಲೇಟನ್ನೂ ಪತ್ತೆಹಚ್ಚಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News