‘ಕಿಸಾನ್ ನಿಧಿ’ ಹಣ ಬಿಡುಗಡೆ 3ನೇ ಅವಧಿಯ ಮೊದಲ ನಿರ್ಧಾರ

Update: 2024-06-10 15:19 GMT

 ನರೇಂದ್ರ ಮೋದಿ |  PC : PTI 

ಹೊಸದಿಲ್ಲಿ: ಐತಿಹಾಸಿಕ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸೋಮವಾರ ಅಧಿಕಾರವನ್ನು ವಹಿಸಿಕೊಂಡ ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕುವ ಮೂಲಕ ತನ್ನ ಕಾರ್ಯಭಾರವನ್ನು ಆರಂಭಿಸಿದರು. ತನ್ಮೂಲಕ 9.3 ಕೋ.ರೈತರಿಗೆ ಯೋಜನೆಯ 17ನೇ ಕಂತಿನ ಹಣ ಸುಮಾರು 20,000 ಕೋ.ರೂ.ಗಳ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ಕಡತಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಮೋದಿ,‘ನಮ್ಮದು ಸಂಪೂರ್ಣವಾಗಿ ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಸರಕಾರವಾಗಿದೆ. ಆದ್ದರಿಂದ ಅಧಿಕಾರ ವಹಿಸಿಕೊಂಡ ಬಳಿಕ ಸಹಿ ಹಾಕಿದ ಮೊದಲ ಕಡತ ರೈತರ ಕಲ್ಯಾಣಕ್ಕೆ ಸಂಬಂಧಿಸಿದ್ದು ಸೂಕ್ತವಾಗಿದೆ. ಮುಂದಿನ ದಿನಗಳಲ್ಲಿ ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ನಾವು ಬಯಸಿದ್ದೇವೆ ’ಎಂದು ಹೇಳಿದರು.

ವಿಶೇಷ ಉಪಕಾರವೇನಲ್ಲ,ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು:ಕಾಂಗ್ರೆಸ್ ಟೀಕೆ

ಪ್ರಧಾನಿ ನರೇಂದ್ರ ಮೋದಿಯವರು ಪಿಎಂ-ಕಿಸಾನ ಸಮ್ಮಾನ್ ನಿಧಿಯ ಹಣವನ್ನು ಬಿಡುಗಡೆಗೊಳಿಸುವ ಮೂಲಕ ರೈತರಿಗೆ ಯಾವುದೇ ವಿಶೇಷ ಉಪಕಾರವನ್ನು ಮಾಡಿಲ್ಲ,ಅದು ಅವರಿಗೆ ತಿಂಗಳ ಹಿಂದೆಯೇ ಸಿಗಬೇಕಿತ್ತು, ಆದರೆ ಚುನಾವಣಾ ನೀತಿ ಸಂಹಿತೆಯಿಂದಾಗಿ ವಿಳಂಬಗೊಂಡಿತ್ತು ಎಂದು ಕಾಂಗ್ರೆಸ್ ಟೀಕಿಸಿದೆ.

ತನ್ನ ನೂತನ ಸರಕಾರದ ಮೊದಲ ನಿರ್ಧಾರವೆಂದು ಮೋದಿ ಹೇಳಿಕೊಳ್ಳುತ್ತಿರುವ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಬಿಡುಗಡೆ ಅವರದೇ ಸರಕಾರದ ನೀತಿಯ ಪ್ರಕಾರ ರೈತರಿಗೆ ಸಿಗಬೇಕಾದ ನ್ಯಾಯಸಮ್ಮತ ಹಕ್ಕು ಆಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ್ ಅವರು, ಪ್ರಧಾನ ಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಅವರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಬೇಕು,ಕೃಷಿ ಸಾಲ ಮನ್ನಾ ಘೋಷಿಸಬೇಕು,ಬೆಳೆ ನಷ್ಟಗೊಂಡ 30 ದಿನಗಳಲ್ಲಿ ಖಾತರಿ ಪಡಿಸಲಾದ ವಿಮೆ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು,ನೂತನ ಆಮದು-ರಫ್ತು ನೀತಿ ರೂಪಿಸುವ ಮುನ್ನ ಅವರೊಂದಿಗೆ ಸಮಾಲೋಚಿಸಬೇಕು ಮತ್ತು ಕೃಷಿಗೆ ಅಗತ್ಯ ಸಾಮಗ್ರಿಗಳ ಮೇಲಿನ ಜಿಎಸ್ಟಿಯನ್ನು ಕೈಬಿಡಬೇಕು ಎಂದಿದ್ದಾರೆ.

ಪಿಎಂ-ಕಿಸಾನ ನಿಧಿಯ 16ನೇ ಕಂತನ್ನು 2024 ಜನವರಿಯಲ್ಲಿ ವಿತರಿಸಬೇಕಿತ್ತು,ಆದರೆ ಪ್ರಧಾನಿಯವರ ಚುನಾವಣಾ ಲೆಕ್ಕಾಚಾರಕ್ಕಾಗಿ ಅದನ್ನು ಒಂದು ತಿಂಗಳು ವಿಳಂಬಿಸಲಾಗಿತ್ತು. ಎಪ್ರಿಲ್/ಮೇ ತಿಂಗಳಿನಲ್ಲಿ ನೀಡಬೇಕಿದ್ದ 17ನೇ ಕಂತಿನ ಹಣವನ್ನು ನೀತಿ ಸಂಹಿತೆಯಿಂದಾಗಿ ಈಗ ವಿತರಿಸಲಾಗುತ್ತಿದೆಯಷ್ಟೇ. ಮೋದಿಯವರು ರೈತರಿಗೆ ವಿಶೇಷ ಉಪಕಾರವನ್ನೇನೂ ಮಾಡಿಲ್ಲ. ಮಾಮೂಲು ಆಡಳಿತಾತ್ಮಕ ನಿರ್ಧಾರಗಳನ್ನೇ ತಾನು ಜನತೆಗೆ ನೀಡುತ್ತಿರುವ ದೊಡ್ಡ ಕೊಡುಗೆ ಎಂಬಂತೆ ಬಿಂಬಿಸುವುದು ಅವರಿಗೆ ಚಟವಾಗಿಬಿಟ್ಟಿದೆ. ಸ್ಪಷ್ಟವಾಗಿ,ಅವರು ತಾನು ಜೈವಿಕವಾಗಿ ಜನಿಸಿಲ್ಲ,ತಾನು ದೈವಾಂಶ ಸಂಭೂತ ಎಂದು ಈಗಲೂ ಭಾವಿಸಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News