ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸಲು ಆಗ್ರಹ ಸೋಮವಾರ ಸುಪ್ರೀಂಕೋರ್ಟ್ ವಿಚಾರಣೆ

Update: 2023-07-23 17:20 GMT

Photo: ಸುಪ್ರೀಂಕೋರ್ಟ್ | PTI 

ಹೊಸದಿಲ್ಲಿ: 6ರಿಂದ 12ನೇ ತರಗತಿಯವರೆಗಿನ ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಉಚಿತವಾಗಿ ಒದಗಿಸುವಂತೆ ಹಾಗೂ ಎಲ್ಲಾ ಸರಕಾ ಅನುದಾನಿತ ಮತ್ತು ವಸತಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯಗಳನ್ನು ಒದಗಿಸುವಂತೆ ಎಲ್ಲಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಲಿದೆ.

ಸಾಮಾಜಿಕ ಕಾರ್ಯಕರ್ತೆ ಜಯಾ ಠಾಕೂರ್ ಸಲ್ಲಿಸಿರುವ ಈ ಆರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಪ್ರದೇಶಗಳಲ್ಲಿ ಜಾರಿಗೊಳಿಸುವು ದಕ್ಕಾಗಿ, ಶಾಲೆಗಳಲ್ಲಿ ಕಲೆಯುತ್ತಿರುವ ಹೆಣ್ಣುಮಕ್ಕಳ ಋತುಸ್ರಾವ ನೈರ್ಮಲ್ಯದ ನಿರ್ವಹಣೆ ಕುರಿತ ಪ್ರಮಾಣಿತ ಕಾರ್ಯವಿಧಾನವನ್ನು ಸಿದ್ಧಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಎಪ್ರಿಲ್ 10ರಂದು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಶಾಲೆಗಳಲ್ಲಿ ಹೆಣ್ಣುಮಕ್ಕಳ ಋತುಸ್ರಾವ ನೈರ್ಮಲ್ಯ ನಿರ್ವಹಣೆ ಕುರಿತ ರಾಷ್ಟ್ರೀಯ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಜೊತೆ ಸಮನ್ವಯತೆಯನ್ನು ಸಾಧಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯವರನ್ನು ನೋಡಲ್ ಅಧಿಕಾರಿಯಾಗಿ ಸರ್ವೋಚ್ಚ ನ್ಯಾಯಾಲಯ ನೇಮಕ ಮಾಡಿದೆ.

ಬಡಕುಟುಂಬಗಳಿಂದ ಬಂದಿರುವ 11ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿನಿಯರು ಮಾಸಿಕ ಋತುಸ್ರಾವದ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಕುಟುಂಬದ ಆರ್ಥಿಕ ದುಸ್ಥಿತಿ, ಅನಕ್ಷರತೆ ಹಾಗೂ ಋತುಸ್ರಾವಕ್ಕೆ ಸಂಬಂಧಪಟ್ಟಂತೆ ಅನೈರ್ಮಲ್ಯದ ಮತ್ತು ಅನಾರೋಗ್ಯಕರ ಪದ್ದತಿಗಳ ಆಚರಣೆಯು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಇದು ಕ್ರಮೇಣ ಅವರನ್ನು ಶಾಲೆಯನ್ನು ತ್ಯಜಿಸುವಂತೆ ಮಾಡುತ್ತದೆ ಎಂದು ಜಯಾಠಾಕೂರ್ ಅವರು ನ್ಯಾಯವಾದಿ ವಾರಿಂದರ್ ಕುಮಾರ್ ಶರ್ಮಾ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News