ಬಿಲ್ಕಿಸ್ ಬಾನು ಪ್ರಕರಣದ ದೋಷಿಯ ವಕೀಲಿ ವೃತ್ತಿಯನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್

Update: 2023-08-24 18:21 GMT

ಬಿಲ್ಕಿಸ್ ಬಾನು | PHOTO : PTI 

ಹೊಸದಿಲ್ಲಿ: ‘ಕಾನೂನನ್ನು ಉದಾತ್ತ ವೃತ್ತಿಯೆಂದು ಭಾವಿಸಲಾಗಿದೆ’-ಬಿಲ್ಕಿಸ್ ಬಾನು ಪ್ರಕರಣದಲ್ಲಿ ಕಳೆದ ವರ್ಷ ಕ್ಷಮಾದಾನ ಪಡೆದಿರುವ ಅಪರಾಧಿ ವಕೀಲಿ ವೃತ್ತಿ ನಡೆಸುತ್ತಿದ್ದಾನೆ ಎಂದು ಗೊತ್ತಾದಾಗ ಸರ್ವೋಚ್ಚ ನ್ಯಾಯಾಲಯವು ಪ್ರತಿಕ್ರಿಯಿಸಿದ್ದು ಹೀಗೆ.

2002ರ ಗುಜರಾತ್ ಗಲಭೆ ಸಂದರ್ಭ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆಸಿದ್ದ ದಂಗೆಕೋರರು ಆಕೆಯ ಕುಟುಂಬಕ್ಕೆ ಸೇರಿದ 14 ಜನರನ್ನು ಕೊಂದಿದ್ದರು. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳು ಕಳೆದ ವರ್ಷದ ಆ.15ರಂದು ಕ್ಷಮಾದಾನದ ಲಾಭ ಪಡೆದು ಬಿಡುಗಡೆಗೊಂಡಿದ್ದರು. ಅವರ ಬಿಡುಗಡೆಯನ್ನು ಬಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಗುರುವಾರ ಅಪರಾಧಿ ರಾಧೇಶ್ಯಾಮ ಶಾಗೆ ನೀಡಿದ ಕ್ಷಮಾದಾನವನ್ನು ಸಮರ್ಥಿಸಿಕೊಂಡ ವಕೀಲ ರಿಶಿ ಮಲ್ಹೋತ್ರಾ ಅವರು, ತನ್ನ ಕಕ್ಷಿದಾರ ಈಗ ಗುಜರಾತಿನಲ್ಲಿ ಮೋಟರ್ ವಾಹನ ಅಪಘಾತ ಪ್ರಕರಣಗಳ ನ್ಯಾಯಾಧಿಕರಣದಲ್ಲಿ ವಕೀಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾನೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಉಜ್ಜಲ ಭುಯಾನ್ ಅವರ ಪೀಠಕ್ಕೆ ತಿಳಿಸಿದರು. ಈಗಾಗಲೇ ಒಂದು ವರ್ಷ ಕಳೆದಿದೆ ಮತ್ತು ಶಾ ವಿರುದ್ಧ ಒಂದೇ ಒಂದು ಪ್ರಕರಣವಿಲ್ಲ. ಆತ ವಕೀಲನಾಗಿದ್ದ ಮತ್ತು ಕ್ಷಮಾದಾನದ ಬಳಿಕ ಮತ್ತೆ ವಕೀಲಿ ಆರಂಭಿಸಿದ್ದಾನೆ ಎಂದರು.

ಆದರೆ ಅಪರಾಧಿಯೋರ್ವ ವಕೀಲಿ ವೃತ್ತಿಯನ್ನು ನಡೆಸಲು ಪರವಾನಿಗೆಯನ್ನು ನೀಡಬಹುದೇ ಎಂದು ಪ್ರಶ್ನಿಸಿದ ನ್ಯಾಯಾಲಯವು, ನೀವು (ಶಾ) ಅಪರಾಧಿಯಾಗಿದ್ದೀರಿ, ಅದರಲ್ಲಿ ಯಾವುದೇ ಸಂಶಯವಿಲ್ಲ. ನಿಮಗೆ ಸಿಕ್ಕಿರುವ ಕ್ಷಮಾದಾನದಿಂದಾಗಿ ನೀವು ಜೈಲಿನಿಂದ ಹೊರಗಿದ್ದೀರಿ. ಶಿಕ್ಷೆಯ ಅವಧಿ ಮಾತ್ರ ಕಡಿತಗೊಂಡಿದೆ, ದೋಷ ನಿರ್ಣಯವು ಹಾಗೆಯೇ ಇರುತ್ತದೆ ಎಂದು ಹೇಳಿತು.

ಅಪರಾಧಿಯೋರ್ವ ವಕೀಲಿ ವೃತ್ತಿಯನ್ನು ನಡೆಸಬಹುದೇ ಎನ್ನುವುದನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರಿಶೀಲಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News