ರಾಷ್ಟ್ರವ್ಯಾಪಿ ಜಾತಿ ಜನಗಣತಿ ನಡೆಸಬೇಕು ಎಂದು ಕೇಂದ್ರವನ್ನು ಆಗ್ರಹಿಸುವ ಗೊತ್ತುವಳಿಯನ್ನು ಸರ್ವಾನುಮತದಿಂದ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

Update: 2024-06-26 09:16 GMT

ಎಂ.ಕೆ.ಸ್ಟಾಲಿನ್ |  PC : X

ಚೆನ್ನೈ: 2021ರಿಂದ ನಿಲುಗಡೆಯಾಗಿರುವ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ಜಾತಿ ಜನಗಣತಿಯನ್ನು ನಡೆಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಡಿಸಿದ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿತು.

ಇದಕ್ಕೂ ಮುನ್ನ, ಜಾತಿ ಜನಗಣತಿಯನ್ನು ನಡೆಸುವ ಅಧಿಕಾರ ರಾಜ್ಯಕ್ಕೇ ಇರುವಾಗ ಈ ಗೊತ್ತುವಳಿ ಅನಗತ್ಯ ಎಂದು ಪಿಎಂಕೆಯ ಆರ್.ಅರುಳ್ ಅಭಿಪ್ರಾಯ ಪಟ್ಟರಾದರೂ, ಗೊತ್ತುವಳಿಯನ್ನು ಸದನವು ಅಂಗೀಕರಿಸಿದಾಗ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ.

ಗೊತ್ತುವಳಿಯನ್ನು ಮಂಡಿಸಿದ ಮುಖ್ಯಮಂತ್ರಿ ಎಂ.ಕೆ‌.ಸ್ಟಾಲಿನ್, "ಭಾರತದ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ, ಆರ್ಥಿಕತೆ ಹಾಗೂ ಉದ್ಯೋಗಗಳಲ್ಲಿ ಸಮಾನ ಹಕ್ಕು ಮತ್ತು ಸಮಾನ ಅವಕಾಶ ಒದಗಿಸಲು ನೀತಿಗಳನ್ನು ರೂಪಿಸಲು ಜಾತಿ ಆಧಾರಿತ ಜನ ಗಣತಿ ನಡೆಸುವುದು ಅತ್ಯಗತ್ಯ ಎಂದು ಸದನವು ಭಾವಿಸಿದೆ. ಹೀಗಾಗಿ 2021ರಿಂದ ಬಾಕಿ ಇರುವ ಜನ ಗಣತಿಯನ್ನು ಜಾತಿ ಗಣತಿಯೊಂದಿಗೆ ಈ ಬಾರಿ ನಡೆಸಬೇಕು ಎಂದು ಈ ಸದನವು ಕೇಂದ್ರ ಸರಕಾರವನ್ನು ಸರ್ವಾನುಮತದಿಂದ ಆಗ್ರಹಿಸುತ್ತದೆ" ಎಂದು ಹೇಳಿದರು.

ಗೊತ್ತುವಳಿಯನ್ನು ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಜನಗಣತಿ ಕಾಯ್ದೆಯ ಪ್ರಕಾರ, ಜಾತಿ ಜನಗಣತಿಯನ್ನು ಕೇವಲ ಭಾರತ ಸರಕಾರ ಮಾತ್ರ ಮಾಡಬಹುದಾಗಿದೆ ಎಂದೂ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News