ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿರಲು ಕಾರಣವಿಲ್ಲ, ಅವರ ಜನಸಂಖ್ಯೆ ಹೆಚ್ಚುತ್ತಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

Update: 2024-05-11 16:43 GMT

ಕೇಂದ್ರ ಸಚಿವ ಅನುರಾಗ್ ಠಾಕೂರ್ | PC : PTI 

ಹಮೀರ್‌ಪುರ: ಭಾರತದ ಜನಸಂಖ್ಯಾ ಪರಿವರ್ತನೆ ಕುರಿತು ಹೊಸ ವರದಿಯನ್ನು ಉಲ್ಲೇಖಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು,‌ ಮುಸ್ಲಿಮರ ಜನಸಂಖ್ಯೆಯು ಶೇ.45ರಷ್ಟು ಹೆಚ್ಚಾಗಿರುವಾಗ ಮತ್ತು ಸಮುದಾಯವು ಸರಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಮಾನ ಪಾಲನ್ನು ಪಡೆಯುತ್ತಿರುವಾಗ ಅವರು ದೇಶದಲ್ಲಿ ತಾವು ಅಸುರಕ್ಷಿತರು ಎಂದು ಭಾವಿಸಲು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

1950 ಮತ್ತು 2015ರ ನಡುವೆ ಭಾರತದಲ್ಲಿ ಬಹುಸಂಖ್ಯಾತ ಹಿಂದುಗಳ ಜನಸಂಖ್ಯೆಯು ಶೇ.7.82ರಷ್ಟು ಕುಸಿದಿದೆ ಮತ್ತು ಮುಸ್ಲಿಮರ ಜನಸಂಖ್ಯೆಯು ಶೇ.43.15ರಷ್ಟು ಹೆಚ್ಚಳಗೊಂಡಿದೆ ಎಂದು ಇತ್ತೀಚಿಗೆ ಬಿಡುಗಡೆಗೊಳಿಸಿದ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿರುವ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು, ವಿವಿಧತೆಯನ್ನು ಪೋಷಿಸಲು ಪೂರಕ ವಾತಾವರಣವಿದೆ ಎಂದು ಸೂಚಿಸಿತ್ತು. ಆದರೆ ಅದು ಜನಸಂಖ್ಯೆಯ ಏರಿಕೆ ಅಥವಾ ಕುಸಿತಕ್ಕೆ ಸಂಬಂಧಿಸಿದಂತೆ ಪರಿಪೂರ್ಣ ಅಂಕಿಅಂಶಗಳನ್ನು ನೀಡಿಲ್ಲ.

ಅಲ್ಪಸಂಖ್ಯಾತರು ಅಭಿವೃದ್ಧಿ ಹೊಂದುತ್ತಿರುವುದು ಸ್ಪಷ್ಟವಾಗಿದೆ ಮತ್ತು ಚಿಂತಿಸುವ ಅಗತ್ಯವಿಲ್ಲ ಎಂದು ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಠಾಕೂರ್ ಹೇಳಿದ್ದಾರೆ.

ಬಿಜೆಪಿಯು ಸಂವಿಧಾನವನ್ನು ಬದಲಿಸಲಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು,ಇದಕ್ಕೆ ವ್ಯತಿರಿಕ್ತವಾಗಿ ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳ ಮೀಸಲಾತಿಯನ್ನು ಯಾರೂ ದುರ್ಬಲಗೊಳಿಸದಂತೆ ಅಥವಾ ಬದಲಿಸದಂತೆ ಬಿಜೆಪಿ ನೋಡಿಕೊಳ್ಳಲಿದೆ ಎಂದರು.

ಹಿಮಾಚಲ ಪ್ರದೇಶದ ಹಮೀರ್‌ಪುರದಿಂದ ನಾಲ್ಕು ಬಾರಿ ಸಂಸದರಾಗಿದ್ದು, ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸತ್ಪಾಲ್ ರೈಝಾದಾ ವಿರುದ್ಧ ಕಣಕ್ಕಿಳಿದಿರುವ ಠಾಕೂರ್, ಕಾಂಗ್ರೆಸ್ ಪಕ್ಷವು ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡಲು ಬಯಸಿದೆ ಎಂದು ಆರೋಪಿಸಿದರು.

ಜನಸಂಖ್ಯೆ ಸ್ವರೂಪವು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಜನಸಂಖ್ಯಾ ನಿಯಂತ್ರಣ ಕುರಿತು ನೀತಿ ಅಥವಾ ಶಾಸನದ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಅವರು, ನೂತನ ಸರಕಾರವು ಈ ವಿಷಯವನ್ನು ಚರ್ಚಿಸಲಿದೆ ಮತ್ತು ನಂತರ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ ಎಂದು ಉತ್ತರಿಸಿದರು.

‘ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಹಿಂದುಗಳ ಜನಸಂಖ್ಯೆ ಕುಸಿಯುತ್ತಿದೆ ಎಂದು ಅಧ್ಯಯನ ವರದಿಯು ಹೇಳಿದೆ. ಇದರ ಹಿಂದಿನ ಕಾರಣಗಳ ಬಗ್ಗೆ ಆಲೋಚಿಸಬೇಕಿದೆ. ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 1947ರಲ್ಲಿ ಶೇ.23ರಷ್ಟಿದ್ದ ಹಿಂದುಗಳ ಜನಸಂಖ್ಯೆ ಈಗ ಕೇವಲ ಶೇ.2ರಷ್ಟಿದೆ. ಆದರೂ ಭಾರತದಲ್ಲಿಯ ಕೆಲವರು ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರ ಜನಸಂಖ್ಯೆಯು ಶೇ.45ರಷ್ಟು ಹೆಚ್ಚಳಗೊಂಡಿದೆ,ಆದರೂ ಅವರು ಅಸುರಕ್ಷಿತರಾಗಿದ್ದಾರೆ ಎನ್ನುತ್ತಿದ್ದಾರೆ. ಅವರು ಅಸುರಕ್ಷಿತರಾಗಿರಲು ಹೇಗೆ ಸಾಧ್ಯ? ನಮಗೆ ಮತಗಳನ್ನು ಹಾಕಿ ಎಂದು ನಾವೆಂದೂ ಬಲವಂತಗೊಳಿಸಿಲ್ಲ, ನಾವು ಯಾವುದೇ ವೋಟ್‌ಬ್ಯಾಂಕ್ ರಾಜಕೀಯದಲ್ಲಿ ತೊಡಗಿಲ್ಲ ’ ಎಂದು ಹೇಳಿದ ಠಾಕೂರ್, ‘ನಾವು ಮುಸ್ಲಿಮ್ ಮಹಿಳೆಯರನ್ನು ತ್ರಿವಳಿ ತಲಾಕ್ ಪಿಡುಗಿನಿಂದ ಮುಕ್ತಗೊಳಿಸಿದ್ದೇವೆ. ಎಂಟು ಮಕ್ಕಳಿದ್ದರೂ ಮುಸ್ಲಿಮ್ ಮಹಿಳೆಯರಿಗೆ ಉಚಿತ ಪಕ್ಕಾ ಮನೆಗಳು, ಶೌಚಾಲಯಗಳು ಮತ್ತು ಅಡುಗೆ ಅನಿಲ, ಜೊತೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನೂ ಒದಗಿಸಿದ್ದೇವೆ. ಅವರು ನಮ್ಮ ಯೋಜನೆಗಳ ಲಾಭಗಳನ್ನೂ ಪಡೆದಿದ್ದಾರೆ ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News