ಈ ಬಾರಿ ಕೇರಳ, ಈಶಾನ್ಯಕ್ಕೆ ಏಕಕಾಲದಲ್ಲಿ ಮುಂಗಾರು ಪ್ರವೇಶ

Update: 2024-05-30 04:40 GMT

PC: PTI

ಹೊಸದಿಲ್ಲಿ: ಅಪರೂಪದ ವಿದ್ಯಮಾನವೊಂದರಲ್ಲಿ ಈ ಬಾರಿ ಮುಂಗಾರು ಕೇರಳ ಹಾಗೂ ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳನ್ನು ಏಕಕಾಲದಲ್ಲಿ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಮುಂದಿನ 24 ಗಂಟೆಗಳಲ್ಲಿ ಅಂದರೆ ಅಂದಾಜಿಗಿಂತ ಮುನ್ನವೇ ಮುಂಗಾರು ಪ್ರವೇಶಿಸಲು ಅನುಕೂಲಕರ ವಾತಾವರಣವಿದೆ ಎಂದು ಇಲಾಖೆ ಹೇಳಿದೆ.

ಮುಂಗಾರು ಮಾರುತ ಸಾಮಾನ್ಯವಾಗಿ ಕೇರಳಕ್ಕೆ ಜೂನ್ 1ರಂದು ಪ್ರವೇಶಿಸಿದರೆ, ಕೆಲ ದಿನಗಳ ಬಳಿಕ ಅಂದರೆ ಜೂನ್ 5ರ ವೇಳೆಗೆ ಈಶಾನ್ಯ ಹಾಗೂ ಇತರ ಪ್ರದೇಶಗಳನ್ನು ತಲುಪುತ್ತದೆ.

ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳನ್ನು ಮುಂಗಾರು ಪ್ರವೇಶಿಸುವ ವಿದ್ಯಮಾನ ಮೇ 30, 2017ರಂದು ನಡೆದಿತ್ತು. ಮೋರಾ ಚಂಡಮಾರುತದ ಕಾರಣದಿಂದ ಪೂರ್ವ ಕೇಂದ್ರ ಬಂಗಾಳಕೊಲ್ಲಿಯಲ್ಲಿ ಮುಂಗಾರು ಮಾರುತ ರೂಪುಗೊಂಡಿತ್ತು. ಈ ಬಾರಿ ಕಳೆದ ವಾರ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ರೇಮಲ್ ಚಂಡಮಾರುತ ಈ ಏಕಕಾಲದ ಪ್ರವೇಶಕ್ಕೆ ಕಾರಣವಾಗಿದೆ. ಚಂಡಮಾರುತದ ಪ್ರಸರಣ ಮುಂಗಾರನ್ನು ಈ ಪ್ರದೇಶಕ್ಕೆ ಹರಿಸಲು ಕಾರಣವಾಗಿದೆ.

ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ಮತ್ತು ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲು ಮತ್ತು ಮುನ್ನಡೆಯಲು ಅನುಕೂಲಕರ ವಾತಾವರಣ ಮುಂದುವರಿದಿದೆ ಎಂದು ಹಾಮಾನ ಇಲಾಖೆ ಮಳೆಯನ್ನು ಅಂದಾಜಿಸಿದೆ. ಕಳೆದ ವರ್ಷ ಒಂದು ವಾರ ವಿಳಂಬವಾಗಿ ಮುಂಗಾರು ಕೇರಳವನ್ನು ಪ್ರವೇಶಿಸಿತ್ತು.

ಈ ಬಾರಿ ಮೇ 31ರಂದು ಅಥವಾ ನಾಲ್ಕು ದಿನಗಳ ಹಿಂದೆ- ಮುಂದಿನ ಅವಧಿಯಲ್ಲಿ ಮುಂಗಾರು ಕೇರಳವನ್ನು ಪ್ರವೇಶಿಸುವ ಅಂದಾಜನ್ನು ಹವಾಮಾನ ಇಲಾಖೆ ಮಾಡಿತ್ತು. 2015ನ್ನು ಹೊರತುಪಡಿಸಿ 2005ರಿಂದೀಚೆಗೆ ಇಲಾಖೆಯ ಮುನ್ಸೂಚನೆ ಸರಿಯಾಗಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News