ಆನೆ ದಾಳಿಯ ಭೀತಿಯಿಂದ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತದಿಂದ ಮೃತ್ಯು
ರಾಂಚಿ: ಆನೆದಾಳಿಯ ಭೀತಿಯಿಂದ ಜತೆಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತದಿಂದ ಮೃತಪಟ್ಟಿರುವ ಧಾರುಣ ಘಟನೆ ಜಾರ್ಖಂಡ್ ನ ಗವ್ರ್ಹಾ ಜಿಲ್ಲೆಯ ಚಿನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಚಪ್ಕಲಿ ಎಂಬ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಆನೆ ದಾಳಿಯ ಭೀತಿಯಿಂದ ಒಂದು ಕುಟುಂಬದ ಸುಮಾರು 8-10 ಮಕ್ಕಳು ಹೆಂಚಿನ ಮನೆಯಲ್ಲಿ ನೆಲದ ಮೇಲೆ ಒಟ್ಟಿಗೆ ನಿದ್ರಿಸುತ್ತಿದ್ದರು. ಬಹುಶಃ ಅತ್ಯಂತ ವಿಷಕಾರಿ ಎನಿಸಿದ ಕಾಳಿಂಗ ಸರ್ಪ ಮನೆಯೊಳಗೆ ಬಂದು ಮಕ್ಕಳನ್ನು ಕಚ್ಚಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಂತ್ರಸ್ತ ಮಕ್ಕಳನ್ನು ರಾತ್ರಿ 1 ಗಂಟೆ ಸುಮಾರಿಗೆ ಮಾಂತ್ರಿಕನ ಬಳಿಕ ಕರೆದೊಯ್ದಿದ್ದು, ಅಲ್ಲಿ ಇಬ್ಬರು ಮಕ್ಕಳು ಮೃತಪಟ್ಟರು. ಬಳಿಕ ಮೂರನೇ ಮಗುವನ್ನು ನಕಲಿ ವೈದ್ಯನೊಬ್ಬನ ಬಳಿಗೆ ಕರೆದೊಯ್ದಿದ್ದು, ಆಕೆ ಕೂಡಾ ಮಾರ್ಗಮಧ್ಯದಲ್ಲಿ ಮೃತಪಟ್ಟಳು ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಕ್ಕಳನ್ನು ಪನ್ನೇಲಾಲ್ ಕೊರವ (15), ಕಾಂಚನ್ ಕುಮಾರಿ (8) ಮತ್ತು ಬೇಬಿ ಕುಮಾರಿ (9) ಎಂದು ಗುರುತಿಸಲಾಗಿದೆ ಎಂದು ಠಾಣಾಧಿಕಾರಿ ನೀರಜ್ ಕುಮಾರ್ ಹೇಳಿದ್ದಾರೆ. ಗ್ರಾಮದಲ್ಲಿ ಆನೆಕಾಟ ವ್ಯಾಪಕವಾಗಿರುವುದರಿಂದ ಗ್ರಾಮಸ್ಥರು ಸುರಕ್ಷಿತ ಜಾಗದಲ್ಲಿ ಮಲಗುವುದು ಅನಿವಾರ್ಯವಾಗಿದೆ. ಗ್ರಾಮಸ್ಥರು ಗುಂಪಾಗಿ ಶಾಲಾ ಕಟ್ಟಡದ ಛಾವಣಿಯಲ್ಲಿ ಮಲಗುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ವಿವರಿಸಿದ್ದಾರೆ.