ರೈಲ್ವೇ ಸಿಬ್ಬಂದಿಯಿಂದ ಮೂವರು ಮುಸ್ಲಿಮರ ಹತ್ಯೆ ಪ್ರಕರಣ: ಕರ್ತವ್ಯ ನಿರ್ವಹಿಸಲು ವಿಫಲರಾದ ಇನ್ನಿಬ್ಬರು ಸಿಬ್ಬಂದಿಗಳು ವಜಾ

Update: 2024-03-10 11:17 GMT

Photo: NDTV 

ಹೊಸದಿಲ್ಲಿ: ಕಳೆದ ವರ್ಷ ಚಲಿಸುತ್ತಿರುವ ರೈಲಿನಲ್ಲಿ ಹಿರಿಯ ಅಧಿಕಾರಿ ಮತ್ತು ಮೂವರು ಮುಸ್ಲಿಂ ಪ್ರಯಾಣಿಕರನ್ನು ತಮ್ಮ ಸಹೋದ್ಯೋಗಿ ಗುಂಡಿಕ್ಕಿ ಕೊಲ್ಲುವಾಗ "ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ" ಕಾರಣಕ್ಕಾಗಿ ಇಬ್ಬರು ರೈಲ್ವೆ ರಕ್ಷಣಾ ಪಡೆ ಕಾನ್‌ಸ್ಟೇಬಲ್‌ಗಳನ್ನು ಅವರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು indianexpress.com ರವಿವಾರ ವರದಿ ಮಾಡಿದೆ.

ಜುಲೈ 31 ರಂದು, ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಮುಸ್ಲಿಂ ಪ್ರಯಾಣಿಕರಾದ ಅಬ್ದುಲ್ ಖಾದರ್‌ ಭಾಯ್ ಭಾನ್‌ಪುರ್‌ವಾಲಾ, ಸದರ್ ಮುಹಮ್ಮದ್ ಹುಸೇನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಕೊಂದಿದ್ದ ರೈಲ್ವೇ ಸಂರಕ್ಷಣಾ ಪಡೆ ಕಾನ್‌ಸ್ಟೆಬಲ್ ಚೇತನ್‌ಸಿಂಹ ಚೌಧರಿಯನ್ನು ರೈಲ್ವೆ ವಜಾಗೊಳಿಸಿತ್ತು.

ಶುಕ್ರವಾರದ ಆದೇಶದಲ್ಲಿ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಎಸ್‌ಕೆಎಸ್ ರಾಥೋರ್ ಅವರು ಕಾನ್‌ಸ್ಟೆಬಲ್‌ಗಳಾದ ಅಮಯ್ ಆಚಾರ್ಯ ಮತ್ತು ನರೇಂದ್ರ ಪರ್ಮಾರ್ ಅವರನ್ನು ವಜಾಗೊಳಿಸಿದ್ದಾರೆ.

"ಪ್ರಯಾಣಿಕರಿಗೆ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸುವುದು ಕರ್ತವ್ಯದಲ್ಲಿರುವ ಆರೋಪಿ ಕಾನ್‌ಸ್ಟೇಬಲ್‌ಗಳ ಜವಾಬ್ದಾರಿಯಾಗಿದೆ" ಎಂದು ವಜಾಗೊಳಿಸುವ ಆದೇಶವು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ತಿಳಿಸಿದೆ. "ಆದಾಗ್ಯೂ, ಅವರು ಜವಾಬ್ದಾರಿ ತೋರಲು ವಿಫಲರಾಗಿದ್ದಾರೆ. ಆರೋಪಿ ಕಾನ್‌ಸ್ಟೆಬಲ್‌ಗಳ ಕೃತ್ಯವು ಪ್ರಯಾಣಿಕರಲ್ಲಿ ಆರ್‌ಪಿಎಫ್‌ನ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ, ಹಾಗೂ ಅಶಿಸ್ತಿನ ಬಗ್ಗೆ ಪಡೆಯ ಇತರ ಸದಸ್ಯರಲ್ಲಿ ತಪ್ಪು ಸಂದೇಶವನ್ನು ರವಾನಿಸುತ್ತದೆ” ಎಂದು ಆದೇಶವು ಹೇಳಿದೆ.

ಚೌಧರಿ ರೈಫಲ್‌ನ ಸುರಕ್ಷತಾ ಕ್ಯಾಚ್ ಅನ್ನು ತೆಗೆದುಹಾಕುವುದನ್ನು ಆಚಾರ್ಯ ನೋಡಿದ್ದ, ಹಾಗೂ ಟೀಕಾರಾಂ ಮೀನಾ ಬಳಿಯಲ್ಲೇ ಆರೋಪಿ ಚೌಧರಿಯನ್ನು ಬಿಟ್ಟು ಘಟನೆ ನಡೆಯುವಾಗ ಆತ ಕೋಚ್‌ನ ವಾಶ್‌ರೂಮ್‌ನಲ್ಲಿ ಅಡಗಿಕೊಂಡಿದ್ದ ಎಂದು ಆಚಾರ್ಯನ ವಜಾ ಆದೇಶದಲ್ಲಿ ತಿಳಿಸಲಾಗಿದೆ.

“ಚೌಧರಿ ತನ್ನ ಮುಂದೆ ಬಂದೂಕು ತೋರಿಸಿ ಪ್ರಯಾಣಿಕರನ್ನು ಒತ್ತೆಯಾಳಾಗಿ ತೆಗೆದುಕೊಂಡಿಟ್ಟಾಗ ಮಧ್ಯಪ್ರವೇಶಿಸುವ ಬದಲು ಇತರ ಪ್ರಯಾಣಿಕರ ಹಿಂದೆ ಪರ್ಮಾರ್‌ ಅಡಗಿಕೊಂಡಿದ್ದನ್ನು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ತೋರಿಸಿವೆ” ಎಂದು ಪರ್ಮಾರ್‌ ಎಂಬಾತನ ವಜಾ ಆದೇಶವು ಹೇಳಿದೆ.

ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದರೂ ಕಾನ್ಸ್‌ಟೇಬಲ್‌ಗಳನ್ನು ಪಡೆಯಲ್ಲಿ ಉಳಿಸಿಕೊಳ್ಳುವುದು ರೈಲ್ವೆ ರಕ್ಷಣಾ ಪಡೆಗೆ ಮಾರಕವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ರಮವನ್ನು ವಿಳಂಬ ಮಾಡುವುದರಿಂದ ಪಡೆಯ ಪ್ರತಿಷ್ಠೆಗೆ ಹಾನಿಯಾಗುತ್ತದೆ ಮತ್ತು ಅಶಿಸ್ತನ್ನು ಉತ್ತೇಜಿಸುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಕರಣ

ಕಳೆದ ವರ್ಷ, ರೈಲ್ವೆ ರಕ್ಷಣಾ ಪಡೆ ಕಾನ್‌ಸ್ಟೆಬಲ್‌ ಚೇತನ್‌ ಸಿಂಹ ಚೌಧರಿ, ಆತನ ಹಿರಿಯ ಅಧಿಕಾರಿ ಮತ್ತು ಮೂವರು ಮುಸ್ಲಿಂ ಪ್ರಯಾಣಿಕರನ್ನು ಗುಂಡಿಟ್ಟು ಕೊಂದಿದ್ದ. ಕೊಲ್ಲುವ ಮುನ್ನ ಅವರ ಗುರುತನ್ನು ಕೇಳಿ ಮುಸ್ಲಿಮರೆಂದು ತಿಳಿದ ನಂತರ ಹತ್ಯೆಗೈದಿದ್ದ. ಮುಸ್ಲಿಂ ಪ್ರಯಾಣಿಕರ ಮೃತದೇಹದ ಎದುರು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿ ಹಂತಕ ಮಾಡುತ್ತಿರುವ ಭಾಷಣವನ್ನು ಇತರೆ ಪ್ರಯಾಣಿಕರು ಚಿತ್ರೀಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News