ಎನ್ಐಎಗೆ ಬೇಕಾಗಿದ್ದ ಮೂವರು ಶಂಕಿತ ಐಸಿಸ್ ಭಯೋತ್ಪಾದಕರು ದಿಲ್ಲಿ ಪೋಲಿಸರ ಬಲೆಗೆ

Update: 2023-10-02 16:20 GMT

Photo: PTI 

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಬೇಕಾಗಿದ್ದ ಮೂವರು ಶಂಕಿತ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕರನ್ನು ದಿಲ್ಲಿ ಪೋಲಿಸರ ವಿಶೇಷ ಘಟಕವು ಸೋಮವಾರ ಬಂಧಿಸಿದೆ.

ಬಂಧಿತರಲ್ಲೋರ್ವನನ್ನು ಶಾನವಾಜ್ ಅಲಿಯಾಸ್ ಶಫಿ ಉಝ್ಝಾಮ ಎಂದು ಗುರುತಿಸಲಾಗಿದ್ದು, ಕಳೆದ ತಿಂಗಳು ಎನ್ಐಎ ಆತನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಮೂರು ಲ.ರೂ.ಗಳ ಬಹುಮಾನವನ್ನು ಘೋಷಿಸಿತ್ತು.

ಎಲ್ಲ ಮೂವರೂ ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು,ಏಳು ದಿನಗಳ ಪೋಲಿಸ್ ಕಸ್ಟಡಿಯನ್ನು ವಿಧಿಸಲಾಗಿದೆ.

ಶಾನವಾಜ್ ನಿಂದ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತ ಕಳೆದ 3-4 ವರ್ಷಗಳಿಂದ ಸಕ್ರಿಯನಾಗಿದ್ದ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸುತ್ತಿದ್ದ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಾನವಾಜ್ ನನ್ನು ಜು.18ರಂದು ಪುಣೆಯಲ್ಲಿ ಬಂಧಿಸಲಾಗಿತ್ತು. ದ್ವಿಚಕ್ರ ವಾಹನ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಮುಹಮ್ಮದ್ ಯೂಸುಫ್ ಖಾನ್ ಮತ್ತು ಮುಹಮ್ಮದ್ ಯೂನುಸ್ ಮುಹಮ್ಮದ್ ಯಾಕೂಬ್ ಸಾಕಿ ಅವರೂ ಶಾನವಾಜ್ ಜೊತೆ ಬಂಧಿಸಲ್ಪಟ್ಟಿದ್ದರು.

ಬಂಧಿತರನ್ನು ಶೋಧ ಕಾರ್ಯಾಚರಣೆಗಾಗಿ ಪುಣೆಯ ಕೊಂಧ್ವಾ ಪ್ರದೇಶದಲ್ಲಿಯ ಅವರ ಮನೆಗೆ ಕರೆದೊಯ್ಯುತ್ತಿದ್ದಾಗ ಶಾನವಾಜ್ ಪೊಲೀಸ್ ವಾಹನದಿಂದ ಪರಾರಿಯಾಗಿದ್ದ.

ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಜು.22ರಂದು ತನಿಖೆಯನ್ನು ಪುಣೆ ಪೊಲೀಸರಿಂದ ಹಸ್ತಾಂತರಿಸಿಕೊಂಡಿತ್ತು.

ಕೊಂಧ್ವಾ ಬಳಿಯ ಬೋಪಟಘರ್ನಿಂದ ಬಾಂಬ್ ಗಳ ತಯಾರಿಕೆಯಲ್ಲಿ ಬಳಕೆಯಾಗುವ ಕೆಲವು ಆ್ಯಸಿಡ್ ಗಳು ಮತ್ತು ಇತರ ರಾಸಾಯನಿಕಗಳನ್ನೂ ಎಟಿಎಸ್ ವಶಪಡಿಸಿಕೊಂಡಿತ್ತು. ಆ.8ರಂದು ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. ಆರೋಪಿಗಳು ಪುಣೆಯಲ್ಲಿ ‘ಬಾಂಬ್ ವರ್ಕಶಾಪ್’ಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಿರುವ ಎನ್ಐಎ,ಅವರು ಪ್ರಾತ್ಯಕ್ಷಿಕೆಗಾಗಿ ಸುಧಾರಿತ ಸ್ಫೋಟಕ ಸಾಧನವನ್ನು ತಯಾರಿಸಿದ್ದರು ಮತ್ತು ಕೊಂಧ್ವಾದಲ್ಲಿ ನಿಯಂತ್ರಿತ ಸ್ಫೋಟವನ್ನು ನಡೆಸಿದ್ದರು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News