ತಿರುಪತಿ ಲಡ್ಡುಗಳಲ್ಲಿ ಕಲಬೆರಕೆ ಆರೋಪ | ವಿಶೇಷ ತನಿಖಾ ತಂಡ ರಚನೆ
ಹೊಸದಿಲ್ಲಿ : ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಆರೋಪಗಳ ಕುರಿತು ತನಿಖೆಗಾಗಿ ಆಂಧ್ರಪ್ರದೇಶ ಸರಕಾರವು ಒಂಭತ್ತು ಸದಸ್ಯರ ವಿಶೇಷ ತನಿಖಾ ತಂಡ (SIT)ವನ್ನು ರಚಿಸಿದೆ. ತಿರುಪತಿ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಇದು ದೇಶಾದ್ಯಂತ ಹಿಂದು ಭಕ್ತರಲ್ಲಿ ವ್ಯಾಪಕ ಕಳವಳಗಳನ್ನುಂಟು ಮಾಡಿದೆ.
ಗುರುವಾರ ತಡರಾತ್ರಿ ಹೊರಡಿಸಲಾದ ಆದೇಶದಲ್ಲಿ SIT ರಚನೆಯನ್ನು ದೃಢಪಡಿಸಿರುವ ಮುಖ್ಯ ಕಾರ್ಯದರ್ಶಿ ನೀರಭ್ ಕುಮಾರ್ ಪ್ರಸಾದ್ ಅವರು, ದೇವಸ್ಥಾನದ ಆಡಳಿತವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ಸ್(ಟಿಟಿಡಿ)ನ ಪಾವಿತ್ರ್ಯವನ್ನು ಕಾಪಾಡಲು ಸರಕಾರದ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.
ಕಳೆದ ವಾರ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತದಡಿ ತಿರುಪತಿ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪವನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದರು. ಸೆ.22ರಂದು ಉಂಡವಳ್ಳಿಯ ತನ್ನ ನಿವಾಸದಲ್ಲಿ ಮಾತನಾಡಿದ ಸಂದರ್ಭ ಅವರು ಈ ಬಗ್ಗೆ ತನಿಖೆಗಾಗಿ ವಿಶೇಷ ತಂಡವೊಂದನ್ನು ರಚಿಸುವುದಾಗಿ ಪ್ರಕಟಿಸಿದ್ದರು.
ಗುಂಟೂರು ವಲಯದ ಐಜಿಪಿ ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದ SIT ಹಲವಾರು ಪೋಲಿಸ್ ಅಧಿಕಾರಿಗಳನ್ನು ಒಳಗೊಂಡಿದೆ.
ತನಿಖೆಯ ವಸ್ತುನಿಷ್ಠತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು, ಮುಖ್ಯಮಂತ್ರಿಗೆ ಉತ್ತರದಾಯಿಯಾಗಿರುವ ಏಜೆನ್ಸಿಯಿಂದ ತನಿಖೆಯು ಸೂಕ್ತವಲ್ಲ ಎಂದು ಪ್ರತಿಪಾದಿಸಿದ್ದಾರೆ. ನಿಷ್ಪಕ್ಷತೆಯನ್ನು ಖಚಿತಪಡಿಸಲು ಸರ್ವೋಚ್ಛ ನ್ಯಾಯಾಲಯದ ಮೇಲ್ವಿಚಾರಣೆಯಡಿ ತನಿಖೆಗೆ ಅವರು ಆಗ್ರಹಿಸಿದ್ದಾರೆ.
ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪಿ.ಸುಧಾಕರ ರೆಡ್ಡಿಯವರು, ಮುಖ್ಯಮಂತ್ರಿಗಳ ನೇರ ಅಧೀನದ ತಂಡವು ತನಿಖೆ ನಡೆಸಿದರೆ ಅದರ ಸಮಗ್ರತೆಗೆ ಧಕ್ಕೆಯುಂಟಾಗಬಹುದು ಎಂದು ವಾದಿಸಿದ್ದಾರೆ.