ಕೇಂದ್ರದ ನೀತಿ ವಿರುದ್ಧ ಪ್ರತಿಭಟಿಸಿದ್ದಕ್ಕೆ ದಲಿತ ವಿದ್ಯಾರ್ಥಿಯ ಅಮಾನತು ಮಾಡಿದ ಟಿಐಎಸ್‌ಎಸ್: ಆರೋಪ

Update: 2024-04-20 08:19 GMT

ರಾಮದಾಸ್‌ ಪ್ರಿಣಿ ಶಿವನಾಡನ್‌ (Photo: Instagram)

ಮುಂಬೈ: ಬಿಜೆಪಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಕ್ಕೆ ಮುಂಬೈಯ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸಾಯನ್ಸಸ್‌ (ಟಿಐಎಸ್‌ಎಸ್) ತನ್ನ ಸಂಸ್ಥೆಯ ದಲಿತ ವಿದ್ಯಾರ್ಥಿ ಪಿಎಚ್‌ಡಿ ವಿದ್ಯಾರ್ಥಿ ರಾಮದಾಸ್‌ ಪ್ರಿಣಿ ಶಿವನಾಡನ್‌ ಎಂಬವರನ್ನು ಎರಡು ವರ್ಷ ಅಮಾನತುಗೊಳಿಸಿದೆ ಎಂದು ಪ್ರೊಗ್ರೆಸ್ಸಿವ್‌ ಸ್ಟೂಡೆಂಟ್ಸ್‌ ಯೂನಿಯನ್‌ ಆರೋಪಿಸಿದೆ.

ವಿದ್ಯಾರ್ಥಿ ನಾಯಕರೂ ಆಗಿರುವ ರಾಮದಾಸ್‌ ಅವರ ಹೋರಾಟ ಅಭಿಯಾನಕ್ಕೆ, ಪ್ರಮುಖವಾಗಿ ಜನವರಿಯಲ್ಲಿ ದಿಲ್ಲಿಯಲ್ಲಿ ಸಂಸತ್‌ ಮಾರ್ಚ್‌ನಲ್ಲಿ ಭಾಗವಹಿಸಿದ್ದು ಹಾಗೂ ವಿದ್ಯಾರ್ಥಿಗಳಿಗೆ ರಾಮ್‌ ಕೆ ನಾಮ್‌ ಸಾಕ್ಷ್ಯಚಿತ್ರ ವೀಕ್ಷಿಸಲು ಪ್ರೋತ್ಸಾಹಿಸಿದ್ದಕ್ಕೆ ಆಕ್ಷೇಪಿಸಿ ಹಾಗೂ ಇದು ದೇಶ ವಿರೋಧಿ ಕೃತ್ಯವೆಂದು ಹೇಳಿ ಮಾರ್ಚ್‌ 7ರಂದು ಅವರಿಗೆ ಸಂಸ್ಥೆಯ ರಿಜಿಸ್ಟ್ರಾರ್‌ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದರು.

ಈ ಸಾಕ್ಷ್ಯಚಿತ್ರವನ್ನು ಸಂಸ್ಥೆಯಲ್ಲಿ ಈ ಹಿಂದೆ ಅಧಿಕೃತವಾಗಿ ಪ್ರದರ್ಶಿಸಲಾಗಿತ್ತು ಮತ್ತು ದೂರದರ್ಶನದಲ್ಲೂ ಪ್ರಸಾರಗೊಂಡಿತ್ತು ಎಂದಿರುವ ಯೂನಿಯನ್, “ಸಂಸ್ಥೆಯ ‌ ಈಗಿನ ಆರೆಸ್ಸೆಸ್‌ ಆಡಳಿತ ಆನ್‌ಲೈನ್‌ನಲ್ಲೂ ಧ್ವನಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ,” ಎಂದು ಆರೋಪಿಸಿದೆ.

ಸಂಸ್ಥೆ ಆಕ್ಷೇಪಿಸಿದ್ದ ಸಂಸತ್‌ ಮಾರ್ಚ್‌ ಅನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020 ವಿರೋಧಿಸಿ ಹಮ್ಮಿಕೊಳ್ಳಲಾಗಿತ್ತು ಎಂಬುದನ್ನು ನೆನಪಿಸಿದ ವಿದ್ಯಾರ್ಥಿ ಸಂಘಟನೆ “ ಓರ್ವ ವಿದ್ಯಾರ್ಥಿ ಕ್ಯಾಂಪಸ್‌ ಪ್ರವೇಶಿಸುವುದನ್ನು ಎರಡು ವರ್ಷ ನಿಷೇಧಿಸಿ ಅಮಾನತುಗೊಳಿಸುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧದ ಪ್ರತಿರೋಧವನ್ನು ಹತ್ತಿಕ್ಕಲು ಟಿಐಎಸ್‌ಎಸ್‌ ಆಡಳಿತ ಯತ್ನಿಸುತ್ತಿದೆ,” ಎಂದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News