ಜಾಹೀರಾತುಗಳ ಕುರಿತು ಬಿಜೆಪಿ, ಚುನಾವಣಾ ಆಯೋಗಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ರವಾನಿಸಿದ ಟಿಎಂಸಿ
ಕೋಲ್ಕತಾ : ಬಿಜೆಪಿಯು ತನ್ನ ಎಕ್ಸ್ ಹ್ಯಾಂಡಲ್ ನಲ್ಲಿ ಪ್ರಕಟಿಸಿರುವ ಜಾಹೀರಾತು ಕಲ್ಕತ್ತಾ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂದು ಪ್ರತಿಪಾದಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ),ಕೇಸರಿ ಪಕ್ಷಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಕಳುಹಿಸಿದೆ.
ಮೇ 20ರಂದು ತನ್ನ ಆದೇಶದಲ್ಲಿ ಕಲ್ಕತ್ತಾ ಉಚ್ಚ ನ್ಯಾಯಾಲಯವು ಟಿಎಂಸಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಹಾಗೂ ಜೂ.4ರವರೆಗೆ ಮತ್ತು ಮುಂದಿನ ಆದೇಶದವರೆಗೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸದಂತೆ ಬಿಜೆಪಿಯನ್ನು ನಿರ್ಬಂಧಿಸಿತ್ತು.
ಏಕ ನ್ಯಾಯಾಧೀಶ ಪೀಠದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಲಾಗಿಲ್ಲ, ಹೀಗಿದ್ದರೂ ಬಿಜೆಪಿಯು ಮಂಗಳವಾರ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಅವಹೇಳನಕಾರಿ ಜಾಹೀರಾತನ್ನು ಪ್ರಕಟಿಸಿದೆ ಎಂದು ಟಿಎಂಸಿ ಪರ ವಕೀಲ ಸೋಹಂ ದತ್ತಾ ಅವರು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಉದ್ದೇಶಪೂರ್ವಕ ಮತ್ತು ಅವಹೇಳನಕಾರಿ ಪ್ರಕಟಣೆಯನ್ನು ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್ನಿಂದ ಹಿಂದೆಗೆದುಕೊಳ್ಳುವಂತೆ ಮತ್ತು ಎಕ್ಸ್ನಲ್ಲಿ ತಕ್ಷಣ ಸ್ಪಷ್ಟೀಕರಣವನ್ನು ನೀಡವಂತೆ ದತ್ತಾ ಬಿಜೆಪಿಗೆ ಸೂಚಿಸಿದ್ದಾರೆ.
ಮಂಗಳವಾರ ಪ್ರಕಟಗೊಂಡ ಜಾಹೀರಾತು ‘ಸುಳ್ಳು ಮತ್ತು ಮಾನಹಾನಿಕರ’ವಾಗಿದೆ ಎಂದೂ ಅವರು ಬಣ್ಣಿಸಿದ್ದಾರೆ.
ಕಲ್ಕತ್ತಾ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿತ್ತು.