ತಮಿಳುನಾಡು| ವಿಧಾನಸಭಾ ಕಲಾಪಕ್ಕೆ ಅಡಚಣೆ: ಎಐಎಡಿಎಂಕೆ ಶಾಸಕರನ್ನು ಸದನದಿಂದ ಅಮಾನತುಗೊಳಿಸಿದ ಸ್ಪೀಕರ್
Update: 2024-06-26 07:42 GMT
ಚೆನ್ನೈ: ವಿಧಾನಸಭಾ ಕಲಾಪಕ್ಕೆ ಅಡಚಣೆಗೊಳಿಸಿದ ಆರೋಪದಲ್ಲಿ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಹಲವು ಎಐಎಡಿಎಂಕೆ ಶಾಸಕರನ್ನು ವಿಧಾನಸಭಾ ಅಧಿವೇಶನ ಮುಕ್ತಾಯಗೊಳ್ಳುವವರೆಗೂ ಅಮಾನತುಗೊಳಿಸಲಾಗಿದೆ.
ಈ ಕುರಿತು ತಮಿಳುನಾಡು ವಿಧಾನಸಭೆಯಲ್ಲಿ ಗೊತ್ತುವಳಿಯನ್ನು ಅಂಗೀಕರಿಸಿದ ನಂತರ ಈ ಅಮಾನತು ನಿರ್ಣಯವನ್ನು ಕೈಗೊಳ್ಳಲಾಗಿದೆ.
ಕಲ್ಲಿಕುರಿಚಿ ಕಳ್ಳ ಭಟ್ಟಿ ದುರಂತದ ಕುರಿತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ವಿರೋಧ ಪಕ್ಷಗಳ ನಾಯಕ ಪಳನಿಸ್ವಾಮಿ ನಡುವೆ ಸದನದಲ್ಲಿ ವಾಗ್ಯುದ್ಧ ನಡೆದ ಬೆನ್ನಿಗೇ ಈ ಅಮಾನತು ಪ್ರಕಟಣೆ ಹೊರ ಬಿದ್ದಿದೆ.
ವಿಧಾನಸಭಾ ಕಲಾಪಕ್ಕೆ ಅಡ್ಡಿಪಡಿಸಿದ ಎಐಎಡಿಎಂಕೆ ಶಾಸಕರನ್ನು ಸದನದಿಂದ ತೆರವುಗೊಳಿಸುವಂತೆ ವಿಧಾನಸಭಾಧ್ಯಕ್ಷ ಎಂ.ಅಪ್ಪವು ಆದೇಶಿಸಿದರು. ಇದಕ್ಕೂ ಮುನ್ನ ಪ್ರಶ್ನೋತ್ತರ ಕಲಾಪವನ್ನು ಮುಂದೂಡಬೇಕು ಎಂದು ಆಗ್ರಹಿಸಿದ ಎಐಎಡಿಎಂಕೆ ಶಾಸಕರು, ಅಧಿವೇಶನದುದ್ದಕ್ಕೂ ಕಳ್ಳ ಭಟ್ಟಿ ದುರಂತದ ವಿರುದ್ಧ ಘೋಷಣೆಗಳನ್ನು ಕೂಗಿದರು.