ತಮಿಳುನಾಡು ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ, ಐವರ ಸ್ಥಿತಿ ಚಿಂತಾಜನಕ

Update: 2024-06-20 09:38 GMT

Photo: PTI

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿರುವ ಕಳ್ಳಭಟ್ಟಿ ಸಾರಾಯಿ ಸೇವಿಸಿ ಗುರುವಾರ ಬೆಳಗ್ಗೆ ವೇಳೆಗೆ 34 ಮಂದಿ ಮೃತಪಟ್ಟಿದ್ದು, ಸುಮಾರು 100 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಮಂಗಳವಾರ ರಾತ್ರಿ ಕಲ್ಲಕುರಿಚಿಯ ಕರುಣಾಪುರಂನ ಬಹುತೇಕ ಸಂತ್ರಸ್ತರು ಕಲಬೆರಕೆ ಮದ್ಯವನ್ನು ಸೇವಿಸಿದ್ದರು ಎಂದು ಹೇಳಲಾಗಿದೆ. ಕಲಬೆರಕೆ ಮದ್ಯದ ದುಷ್ಪರಿಣಾಮವು ಬುಧವಾರ ಬೆಳಗ್ಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ತಕ್ಷಣವೇ ಸಂತ್ರಸ್ತರನ್ನು ಕಲ್ಲಕುರಿಚಿ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸೇಲಂ, ವಿಲ್ಲಾಪುರಂನಲ್ಲಿನ ಆಸ್ಪತ್ರೆಗಳು ಹಾಗೂ ಪುದುಚೇರಿಯಲ್ಲಿನ ಜವಾಹರಲಾಲ್ ನೆಹರೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು.

ಮೃತರ ಪೈಕಿ ಇಬ್ಬರು ಮಹಿಳೆಯರು ಹಾಗೂ ಓರ್ವ ಲಿಂಗಾತರಿ ವ್ಯಕ್ತಿ ಸೇರಿದ್ದಾರೆ. ಬಹುತೇಕ ಸಂತ್ರಸ್ತರು ಬುಧವಾರ ರಾತ್ರಿಯೇ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಸಂತ್ರಸ್ತರು ಆಸ್ಪತ್ರೆಗಳಿಗೆ ತಲುಪುವ ವೇಳೆಗಾಗಲೇ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆಯನ್ನು ಅಧಿಕೃತ ಮಾಹಿತಿಯಲ್ಲಿ ಕಡಿಮೆ ಹೇಳಲಾಗುತ್ತಿದೆ ಎನ್ನಲಾಗಿದೆ.

ಆಸ್ಪತ್ರೆಗಳಿಗೆ ದಾಖಲಾಗಿರುವ ಸಂತ್ರಸ್ತರನ್ನು ಭೇಟಿ ಮಾಡಿದ ಕಲ್ಲಕುರಿಚಿ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್, ಅವರಿಗೆ ನೆರವು ಹಾಗೂ ವೈದ್ಯಕೀಯ ನಿಗಾ ವ್ಯವಸ್ಥೆಯ ಭರವಸೆ ನೀಡಿದ್ದಾರೆ.

ಈ ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಈ ಘಟನೆಗೆ ಕಾರಣರಾಗಿರುವವರನ್ನು ಹೊಣೆಗಾರರನ್ನಾಗಿಸಬೇಕಾದ ಅಗತ್ಯದ ಕುರಿತು ಒತ್ತಿ ಹೇಳಿದ್ದಾರೆ.

ಘಟನೆಯ ಕುರಿತು ನಡೆಯುತ್ತಿರುವ ತನಿಖೆಗೆ ನೆರವು ನೀಡಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಕಲ್ಲಕುರಿಚಿಯಲ್ಲಿ ನಿಯೋಜಿಸಲಾಗಿದೆ.

ಇಂತಹ ದುರಂತಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿರುವ ತಮಿಳುನಾಡು ಸರಕಾರ, ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಹಾಗೂ ಕಳ್ಳಭಟ್ಟಿ ಮದ್ಯ ತಯಾರಿಕೆಯ ಕೃತ್ಯಗಳು ನಡೆಯುತ್ತಿರುವ ಸ್ಥಳಗಳ ಮೇಲೆ ನಿಗಾವಣೆಯನ್ನು ಹೆಚ್ಚಿಸಲಾಗುವುದು ಎಂದೂ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News