ನಾಳೆ(ಜೂ.9) ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ

Update: 2024-06-08 16:20 GMT

ನರೇಂದ್ರ ಮೋದಿ |  PC : PTI 

ಹೊಸದಿಲ್ಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ರವಿವಾರ ರಾಷ್ಟ್ರಪತಿ ಭವನದಲ್ಲಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ಸತತ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯ ಪ್ರಮಾಣವಚನಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಭದ್ರತೆಯ ನಡುವೆ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ.

ಪ್ರಮಾಣವಚನ ಕಾರ್ಯಕ್ರಮವು ರಾಷ್ಟ್ರಪತಿ ಭವನದ ಮುಂಭಾಗದ ಅಂಗಳದಲ್ಲಿ ಸಂಜೆ 7:15ಕ್ಕೆ ನಿಗದಿಯಾಗಿದೆ. ಪ್ರಮಾಣವಚನ ಕಾರ್ಯಕ್ರಮದ ಬಳಿಕ, ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ)ನ ನಾಯಕರು ಮತ್ತು ಪದಾಧಿಕಾರಿಗಳಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಭೋಜನಕೂಟ ಏರ್ಪಡಿಸಿದ್ದಾರೆ.

ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಶಸ್ ಮತ್ತು ಮಾಲ್ದೀವ್ಸ್ ಮುಂತಾದ ನೆರೆಯ ದೇಶಗಳ ನಾಯಕರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಭಾರತದಿಂದ ವಕೀಲರು, ವೈದ್ಯರು, ಕಲಾವಿದರು, ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳು, ವಿಕಸಿತ ಭಾರತ ರಾಯಭಾರಿಗಳು, ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳು, ಬುಡಕಟ್ಟು ಮಹಿಳೆಯರು ಮತ್ತು ನೈರ್ಮಲ್ಯ ಕೆಲಸಗಾರರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಎಲ್ಲಾ ಧರ್ಮಗಳಿಗೆ ಸೇರಿದ ಸುಮಾರು 50 ಧಾರ್ಮಿಕ ನಾಯಕರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅದೂ ಅಲ್ಲದೆ, ಪದ್ಮ ಪ್ರಶಸ್ತಿ ಪುರಸ್ಕೃತರು ಮತ್ತು ಮನ್ ಕಿ ಬಾತ್ನಲ್ಲಿ ಭಾಗವಹಿಸಿದವರಿಗೂ ಆಹ್ವಾನ ಕಳುಹಿಸಲಾಗಿದೆ.

ರಾಜಕೀಯ ನಾಯಕರ ಜೊತೆಗೆ, ಚಿತ್ರರಂಗದ ವ್ಯಕ್ತಿಗಳು, ಕ್ರೀಡಾಳುಗಳು ಮತ್ತು ಉದ್ಯಮಿಗಳೂ ಉಪಸ್ಥಿತರಿರುವ ನಿರೀಕ್ಷೆಯಿದೆ.

ಕೇಂದ್ರ ಸರಕಾರದ ಯೋಜನೆಗೆಳ ಫಲಾನುಭವಿಗಳಿಗೆ ವಿಶೇಷ ಆಹ್ವಾನಗಳನ್ನು ಕಳುಹಿಸಲಾಗಿದೆ ಎನ್ನಲಾಗಿದೆ. ಕೆಲವು ತೃತೀಯ ಲಿಂಗಿಗಳಿಗೂ ಆಹ್ವಾನ ನೀಡಲಾಗಿದೆ ಎಂದು ವರದಿಗಳು ಹೇಳಿವೆ.

ನೂತನ ಸಂಸತ್ ಕಟ್ಟಡವನ್ನು ಒಳಗೊಂಡ ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಕೆಲಸ ಮಾಡಿರುವ ಕಾರ್ಮಿಕರಿಗೂ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ಕಳುಹಿಸಲಾಗಿದೆ ಎನ್ನಲಾಗಿದೆ.

*ದಿಲ್ಲಿಯಲ್ಲಿ ಭದ್ರತೆ ಹೆಚ್ಚಳ

ನರೇಂದ್ರ ಮೋದಿಯ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ದಿಲ್ಲಿ ಪೊಲೀಸ್ನ ಉನ್ನತ ಅಧಿಕಾರಿಗಳು ರಾಷ್ಟ್ರಪತಿ ಭವನದಲ್ಲಿ ಆಮೂಲಾಗ್ರ ಭದ್ರತಾ ಪರಿಶೀಲನೆ ನಡೆಸಿದ್ದಾರೆ.

ನೆಲದ ಮೇಲಿನ ಭದ್ರತೆಯ ಹೊರತಾಗಿ, ದಿಲ್ಲಿಯ ರಾಷ್ಟ್ರ ರಾಜಧಾನಿ ಭೂಭಾಗವನ್ನು ಹಾರಾಟ ನಿಷೇಧ ವಲಯವೆಂದು ಘೋಷಿಸಿ ದಿಲ್ಲಿ ಪೊಲೀಸರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News