ಸುಪ್ರೀಂ ಕೋರ್ಟ್ ನಲ್ಲಿ ರೈಲ್ವೆ ಮಂಡಳಿಯ ವಿರುದ್ಧ ಹೋರಾಟ | ರಾಹುಲ್ ಗಾಂಧಿಯಿಂದ ಕಾನೂನು ನೆರವು ಕೋರಿದ ಟ್ರ್ಯಾಕ್ ಮನ್ ಸಂಘಟನೆ
ಹೊಸದಿಲ್ಲಿ: ಕಾರ್ಮಿಕ ಸಂಘಟನೆ ಚುನಾವಣೆಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ನಡೆಸಲು ಕಾನೂನು ನೆರವು ಕೋರಿ ಲೋಕಸಭಾ ವಿಪಕ್ಷಗಳ ನಾಯಕ ರಾಹುಲ್ ಗಾಂಧಿಗೆ ಅಖಿಲ ಭಾರತೀಯ ರೈಲ್ವೆ ಹಳಿ ನಿರ್ವಹಣಾಕಾರರ ಸಂಘಟನೆ ಪತ್ರ ಬರೆದಿದೆ.
ಕಾರ್ಮಿಕ ಸಂಘಟನೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಖಿಲ ಭಾರತೀಯ ರೈಲ್ವೆ ಹಳಿ ನಿರ್ವಹಣಾಕಾರರ ಸಂಘಟನೆಗೆ ಬಾಂಬೆ ಹೈಕೋರ್ಟ್ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ನವೆಂಬರ್ 29, 2024ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರೈಲ್ವೆ ಮಂಡಳಿ, ಆ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದಿತ್ತು.
ಅಖಿಲ ಭಾರತೀಯ ರೈಲ್ವೆ ಹಳಿ ನಿರ್ವಹಣಾಕಾರರ ಸಂಘಟನೆ ಅನಧಿಕೃತವಾಗಿದ್ದು, ನಿಯಮಗಳ ಪ್ರಕಾರ ಅದು ಗೋಪ್ಯ ಮತಪತ್ರ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ, ಹೈಕೋರ್ಟ್ ಎದುರು ಪೂರ್ಣ ವಾಸ್ತವಾಂಶಗಳನ್ನು ಬಚ್ಚಿಟ್ಟು ಹಾಗೂ ಒದಗಿಸದೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಯತ್ನಿಸಿದೆ ಎಂದು ರೈಲ್ವೆ ಮಂಡಳಿ ತನ್ನ ಅರ್ಜಿಯಲ್ಲಿ ವಾದಿಸಿದೆ.
“ಹೀಗಿದ್ದೂ, ಡಿಸೆಂಬರ್ 4, 5 ಹಾಗೂ 6ರಂದು ಭಾರತೀಯ ರೈಲ್ವೆಯಾದ್ಯಂತ ಚುನಾವಣೆಗಳನ್ನು ನಡೆಸಲಾಗಿದೆ” ಎಂದು ರೈಲ್ವೆ ಮಂಡಳಿಯ ಕಾರ್ಯಕಾರಿ ನಿರ್ದೇಶಕ (ಮಾಹಿತಿ ಮತ್ತು ಪ್ರಚಾರ) ದಿಲೀಪ್ ಕುಮಾರ್ ಹೇಳಿದ್ದಾರೆ.
ಡಿಸೆಂಬರ್ 4, 5 ಹಾಗೂ 6ರಂದು ಚುನಾವಣೆಗಳು ನಡೆದಿದ್ದು, ಡಿಸೆಂಬರ್ 12ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಿದ್ದೂ, ಫಲಿತಾಂಶ ಪ್ರಕಟಣೆಯನ್ನು ತಡೆ ಹಿಡಿಯಬೇಕು ಹಾಗೂ ನನ್ನ ಭಾಗವಹಿಸುವಿಕೆಗೆ ಅನುಮತಿ ನೀಡುವ ಮೂಲಕ ಮರು ಚುನಾವಣೆ ನಡೆಸಬೇಕು ಎಂದು ಅಖಿಲ ಭಾರತೀಯ ರೈಲ್ವೆ ಹಳಿ ನಿರ್ವಹಣಾಕಾರರ ಸಂಘಟನೆ ಆಗ್ರಹಿಸುತ್ತಿದೆ.
ಈ ಸಂಬಂಧ ಲೋಕಸಭಾ ವಿಪಕ್ಷಗಳ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಅಖಿಲ ಭಾರತೀಯ ರೈಲ್ವೆ ಹಳಿ ನಿರ್ವಹಣಾಕಾರರ ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಚಾಂದ್ ಮುಹಮ್ಮದ್, “ಡಿಸೆಂಬರ್ 10ರಂದು ಸುಪ್ರೀಂ ಕೋರ್ಟ್ ಎದುರು ನಿಗದಿಯಾಗಿರುವ ವಿಚಾರಣೆಯ ಸಂದರ್ಭದಲ್ಲಿ ನಮ್ಮ ಪ್ರಕರಣವನ್ನು ಸಿದ್ಧಪಡಿಸಲು ಹಾಗೂ ಮಂಡಿಸಲು ನಿಮ್ಮ ಅಮೂಲ್ಯ ಕಾನೂನು ನೆರವನ್ನು ವಿಧೇಯತೆಯಿಂದ ಬಯಸುತ್ತಿದ್ದೇವೆ” ಎಂದು ಮನವಿ ಮಾಡಿದ್ದಾರೆ.
ಅಖಿಲ ಭಾರತೀಯ ರೈಲ್ವೆ ಹಳಿ ನಿರ್ವಹಣಾಕಾರರ ಸಂಘಟನೆಯ ಹೆಸರು ಮೋಸಗೊಳಿಸುವಂತಿದ್ದು, ಗೆಜೆಟೇತರ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಎಲ್ಲ ವರ್ಗಗಳನ್ನು ಪ್ರತಿನಿಧಿಸುವುದಿಲ್ಲ ಎಂದು ನವೆಂಬರ್ 11, 2024ರಂದು ಸಂಬಂಧಿತ ಚುನಾವಣಾ ಪ್ರಾಧಿಕಾರವಾದ ರೈಲ್ವೆ ಮಂಡಳಿಯು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಮೂಲಕ, ಅದರ ನಾಮಪತ್ರಗಳನ್ನು ತಿರಸ್ಕರಿಸಿತ್ತು.