ನೂಹ್ ನಲ್ಲಿ VHP ಗೆ ಮೆರವಣಿಗೆ ಅವಕಾಶ ನೀಡಿದರೆ ಟ್ರ್ಯಾಕ್ಟರ್ ರ‍್ಯಾಲಿ; ಮಹಾ ಪಂಚಾಯತ್ ನಲ್ಲಿ ರೈತರ ಎಚ್ಚರಿಕೆ
ಚಂಡಿಗಢ: ನೂಹ್ ನಲ್ಲಿ ಇನ್ನೊಂದು ಮೆರವಣಿಗೆ ನಡೆಸಲು ವಿಶ್ವ ಹಿಂದೂ ಪರಿಷತ್ ಗೆ ಹರ್ಯಾಣ ಸರಕಾರ ಅನುಮತಿ ನೀಡಿದರೆ ಅದಕ್ಕೆ ವಿರುದ್ಧವಾಗಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಗುವುದು ಎಂದು ರೈತ ಸಂಘಟನೆಗಳು ಹಾಗೂ 36 ಸಮುದಾಯಗಳ ಪ್ರತಿನಿಧಿಗಳು ಶನಿವಾರ ನಡೆದ ಮಹಾಪಂಚಾಯತ್ ನಲ್ಲಿ ಎಚ್ಚರಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಆಲ್ವಾರ್ ನಲ್ಲಿ ಶನಿವಾರ ಆಯೋಜಿಸಿದ್ದ ಮಹಾಪಂಚಾಯತ್ ನಲ್ಲಿ ಹರ್ಯಾಣ, ಪಂಜಾಬ್, ಉತ್ತರಪ್ರಪದೇಶ ಹಾಗೂ ರಾಜಸ್ಥಾನದ ರೈತರು ಹಾಗೂ ಸಮುದಾಯದ ನಾಯಕರು ಪಾಲ್ಗೊಂಡಿದ್ದರು.
ನೂಹ್ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಮೇವಾತ್ ವಲಯ ಯಾವಾಗಲೂ ಶಾಂತಿಯುತವಾಗಿದೆ ಎಂದು ಅವರು ಹೇಳಿದ್ದಾರೆ. ಸಮಾಜ ವಿರೋಧಿ ಶಕ್ತಿಗಳು ಜುಲೈ 31ರಂದು ಹಚ್ಚಿದ ಕಿಡಿ ಗಲಭೆ ಭುಗಿದೇಳಲು ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ. ರೈತ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ‘‘ನೂಹ್ ನಲ್ಲಿ ಆಗಸ್ಟ್ 28ರಂದು ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ ನಡೆಸಲು ಹರ್ಯಾಣ ಸರಕಾರ ಅನುಮತಿ ನೀಡಿದರೆ, ನಾವು ಟ್ರಾಕ್ಟರ್ ರ‍್ಯಾಲಿ ನಡೆಸಲಿದ್ದೇವೆ. ಮುಂದಿನ ಪಂಚಾಯತ್ ನಲ್ಲಿ ದಿನಾಂಕ ನಿರ್ಧರಿಸಲಿದ್ದೇವೆ’’ ಎಂದಿದ್ದಾರೆ.
ಜನರು ಹೊಡದಾಡಿಕೊಳ್ಳುವಂತೆ ಮಾಡುವುದು ಹಾಗೂ ಅವರ ಮೇಲೆ ಅಧಿಕಾರ ಸ್ಥಾಪಿಸುವುದು ನಾಯಕನ ನೀತಿ. ನಿಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ. ಉದ್ಯೋಗಕ್ಕೆ ಕಳುಹಿಸಿ. ಗಲಭೆ ನಡೆಸಲು ಕಳುಹಿಸಬೇಡಿ. ನಾವೆಲ್ಲರೂ ಹಿಂದೂಗಳು. ಆದರೆ, ಎರಡು ರೀತಿಯ ಹಿಂದೂಗಳು ಇದ್ದಾರೆ. ಒಂದು ನಾಗಪುರದಿಂದ ಕಾರ್ಯಾಚರಿಸುತ್ತಿರುವವರು. ಇನ್ನೊಂದು, ತಾವು ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವವರು. ಅವರು ಹಿಂಸಾಚಾರದಲ್ಲಿ ತೊಡಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಬಿಕೆಯುನ ರಾಜಸ್ಥಾನದ ರಾಜ್ಯಾಧ್ಯಕ್ಷ ರಾಜಾರಾಮ್ ಮೀಲ್ ಮಾತನಾಡಿ, ಮೇವಾತ್ ನಲ್ಲಿ ಶಾಂತಿ ಕಾಪಾಡುವುದಾಗಿ ರೈತರು ಪ್ರತಿಜ್ಞೆ ಮಾಡಿದ್ದಾರೆ. ನಾವು ಹಿಂಸಾಚಾರವನ್ನು ದ್ವೇಷಿಸುತ್ತೇವೆ. ನೂಹ್ನಂತೆ ಮೇವಾತ್ ನಲ್ಲಿ ಯಾರಾದರೂ ಗಲಭೆಗೆ ಪ್ರಚೋದಿಸಿದರೆ ಲಕ್ಷಾಂತರ ಟ್ರಾಕ್ಟರ್ ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಲಿವೆ ಎಂದು ಅವರು ಹೇಳಿದರು. ಮಹಾಪಂಚಾಯತ್ ನಲ್ಲಿ ಜಮ್ಮು ಹಾಗೂ ಕಾಶ್ಮೀರ, ಗೋವಾ, ಮೇಘಾಲಯದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಕೂಡ ಪಾಲ್ಗೊಂಡಿದ್ದರು.