ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣ: ಹೈಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕೆ ರೂ. 50 ಲಕ್ಷ ಠೇವಣಿ ಇಡಲು ಪತಂಜಲಿಗೆ ಸೂಚನೆ
ಮುಂಬೈ: ಮತ್ತೊಂದು ಕಂಪನಿಯು ದಾಖಲಿಸಿದ್ದ ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣದಲ್ಲಿ ತನ್ನ ಕರ್ಪೂರದ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ತಾನು ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ ಕರ್ಪೂರ ಉತ್ಪನ್ನಗಳ ಮಾರಾಟವನ್ನು ಮುಂದುವರಿಸಿರುವ ಪತಂಜಲಿ ಆಯುರ್ವೇದ್ ಕಂಪನಿಗೆ ರೂ. 50 ಲಕ್ಷ ಠೇವಣಿ ಇಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಂಗಳಂ ಆರ್ಗ್ಯಾನಿಕ್ಸ್ ಲಿಮಿಟೆಡ್ ಎಂಬ ಕಂಪನಿಯು ತನ್ನ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ತನ್ನ ಕರ್ಪೂರದ ಉತ್ಪನ್ನಗಳ ಮಾರಾಟ ಮಾಡಕೂಡದು ಎಂದು ಪತಂಜಲಿ ಆಯುರ್ವೇದ್ ಕಂಪನಿಗೆ ಬಾಂಬೆ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸೂಚಿಸಿತ್ತು.
ಆದರೆ, ಜೂನ್‌ನಲ್ಲಿ ಪತಂಜಲಿ ಕಂಪನಿಯು ಸಲ್ಲಿಸಿರುವ ಪ್ತಮಾಣ ಪತ್ರದಲ್ಲಿ ವಿವಾದಿತ ಕರ್ಪೂರದ ಉತ್ಪನ್ನಗಳ ಮಾರಾಟವನ್ನು ಮಧ್ಯಂತರ ತಡೆಯಾಜ್ಞೆಯನ್ನು ಉಲ್ಲಂಘಿಸಿ ತಾನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುವುದನ್ನು ಜೂನ್ 8ರಂದು ನ್ಯಾ. ಆರ್.ಐ.ಚಗ್ಲಾ ಅವರನ್ನೊಳಗೊಂಡ ಏಕಸದಸ್ಯ ಪೀಠವು ಗಮನಕ್ಕೆ ತೆಗೆದುಕೊಂಡಿತ್ತು.
ಈ ಕುರಿತ ವಿಚಾರಣೆಯ ಸಂದರ್ಭದಲ್ಲಿ ಪತಂಜಲಿ ಕಂಪನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾ. ಆರ್.ಐ.ಚಗ್ಲಾ, "ಒಂದನೇ ಪ್ರತಿವಾದಿಯಾದ ಪತಂಜಲಿಯು ಆಗಸ್ಟ್ 30, 2023ರಂದು ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ಪದೇ ಪದೇ ಉಲ್ಲಂಘಿಸುವುದನ್ನು ಈ ನ್ಯಾಯಾಲಯವು ಸಹಿಸಲು ಸಾಧ್ಯವಿಲ್ಲ" ಎಂದು ಚಾಟಿ ಬೀಸಿದ್ದಾರೆ. ಈ ಆದೇಶದ ಪ್ರತಿಯು ಬುಧವಾರ ಲಭ್ಯವಾಗಿದೆ.
ನ್ಯಾಯಾಂಗ ನಿಂದನೆ/ತಡೆಯಾಜ್ಞೆ ಉಲ್ಲಂಘನೆಯ ಆರೋಪದಲ್ಲಿ ನ್ಯಾಯಾಲಯವು ಪತಂಜಲಿ ಕಂಪನಿಗೆ ರೂ. 50 ಲಕ್ಷ ಠೇವಣಿ ಇರಿಸುವಂತೆ ಸೂಚಿಸಿದೆ.
ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಲಾಗಿದೆ.