ತಮಿಳುನಾಡು: ಜಾತಿ ತಾರತಮ್ಯದ ವಿರುದ್ಧ ಪ್ರತಿಭಟಿಸಿದ ಬುಡಕಟ್ಟು ಪಂಚಾಯತ್ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು

Update: 2024-10-03 11:14 GMT

PC : newindianexpress.com

ವಿಲ್ಲುಪುರಂ: ವಿಲ್ಲುಪುರಂ ಜಿಲ್ಲೆಯ ಗಿಂಗೀ ತಾಲೂಕಿನ ಅಣಂಗೂರ್ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾಗಿರುವ ಬುಡಕಟ್ಟು ಸಮುದಾಯದ ಸಂಗೀತಾ(40) ಜಿಲ್ಲಾಡಳಿತವು ತನ್ನ ಮೊರೆಯನ್ನು ಕೇಳುವಂತೆ ಮಾಡಲು ಅಲೆದಾಡುತ್ತಿದ್ದಾರೆ, ಆದರೆ ಅವರ ಸಂಕಟಗಳಿಗೆ ಜಿಲ್ಲಾಡಳಿತದ ಕಿವಿಗಳು ಕಿವುಡಾಗಿವೆ ಎಂದು newindianexpress.com ವರದಿ ಮಾಡಿದೆ.

ಗ್ರಾ.ಪಂ.ಉಪಾಧ್ಯಕ್ಷೆ ಚಿತ್ರಾ ಗುಣಶೇಖರನ್ ಮತ್ತು ಆಕೆಯ ಪತಿ ಸ್ಥಳೀಯ ಡಿಎಂಕೆ ಶಾಖಾ ಕಾರ್ಯದರ್ಶಿ ಗುಣಶೇಖರನ್ ಅವರಿಂದ ಜಾತಿಯಾಧಾರಿತ ತಾರತಮ್ಯ ಮತ್ತು ಕಿರುಕುಳದ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಲು ಸಂಗೀತಾ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ನಂತರ ಪೋಲಿಸರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಉಪಾಧ್ಯಕ್ಷೆ ಮತ್ತು ಆಕೆಯ ಪತಿಯಿಂದ ಜಾತಿ ತಾರತಮ್ಯವನ್ನು ಆರೋಪಿಸಿ ಸಂಗೀತಾ ಜುಲೈ ಮತ್ತು ಆಗಸ್ಟ್‌ನಲ್ಲಿ ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು, ಆದರೆ ದಂಪತಿ ವಿರುದ್ಧ ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ.

ಮೂರು ವರ್ಷಗಳ ಹಿಂದೆ ತಾನು ಅಧಿಕಾರ ಸ್ವೀಕರಿಸಿದಾಗಿನಿಂದ ಚಿತ್ರಾ ಮತ್ತು ಆಕೆಯ ಪತಿ ನಿರಂತರವಾಗಿ ತನ್ನ ಅಧಿಕೃತ ಕರ್ತವ್ಯಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದು ಸಂಗೀತಾ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರವೆಂದು ಘೋಷಿಸಲ್ಪಟ್ಟ ಬಳಿಕ ಸಂಗೀತಾ ತನ್ನ ಗ್ರಾಮದಲ್ಲಿ ಮೊದಲ ಪಂಚಾಯತ್ ಅಧ್ಯಕ್ಷೆಯಾದ ಮೊದಲ ಇರುಳರ್ ಮಹಿಳೆಯಾಗಿದ್ದಾರೆ.

ನೌಕರರ ಸಂಬಳ ಪಾವತಿಯನ್ನು ಅನುಮೋದಿಸಲು ಹಾಗೂ ನೀರಿನ ಪೈಪ್‌ಗಳ ಅಳವಡಿಕೆ ಮತ್ತು ರಸ್ತೆ ನಿರ್ಮಾಣಗಳಂತಹ ಮೂಲಭೂತ ಸೌಕರ್ಯಗಳಿಗೆ ಹಣಕಾಸನ್ನು ವಿನಿಯೋಗಿಸಲು ಅಗತ್ಯವಿರುವ ಡಿಜಿಟಲ್ ಪಾಸ್‌ವರ್ಡ್‌ನ್ನು ತನಗೆ ಒದಗಿಸಲು ಚಿತ್ರಾ ಮತ್ತು ಆಕೆಯ ಪತಿ ನಿರಾಕರಿಸಿದ್ದಾರೆ. ಅವರು ತನ್ನ ಬುಡಕಟ್ಟು ಗುರುತನ್ನು ಸಾರ್ವಜನಿಕ ಸಭೆಗಳಲ್ಲಿ ತನ್ನನ್ನು ನಿಂದಿಸಲು ಮತ್ತು ಅವಮಾನಿಸಲು ಬಳಸಿದ್ದಾರೆ ಎಂದು ಸಂಗೀತಾ ಹೇಳಿದರು.

‘ಇರುಳರ್ ಮಹಿಳೆಯಾಗಿರುವ ನೀನು ಪಂಚಾಯತ್ ಅಧ್ಯಕ್ಷೆಯ ಕುರ್ಚಿಯಲ್ಲಿ ಕುಳಿತುಕೊಳ್ಳಲೂ ಅರ್ಹಳಲ್ಲ’ ಎಂದು ಚಿತ್ರಾ ತನ್ನನ್ನು ಬಹಿರಂಗವಾಗಿ ಅವಮಾನಿಸಿದ್ದು ಮಾತ್ರವಲ್ಲ,ಆಡಳಿತಾತ್ಮಕ ವಿಷಯಗಳಲ್ಲಿ ತಲೆ ಹಾಕಿದರೆ ದೈಹಿಕ ಹಾನಿಯ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಸಂಗೀತಾ ಆರೋಪಿಸಿದರು.

ಆಗಸ್ಟ್‌ನಲ್ಲಿ ಸಂಗೀತಾರ ದೂರಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ಸಿ.ಪಳನಿ ವಿಚಾರಣೆಗೆ ಆದೇಶಿಸಿದ್ದರು ಮತ್ತು ಅವರಿಗೆ ಡಿಜಿಟಲ್ ಪಾಸ್‌ವರ್ಡ್‌ನ್ನು ಒದಗಿಸುವಂತೆ ಚಿತ್ರಾ ಗುಣಶೇಖರನ್‌ಗೆ ನಿರ್ದೇಶನ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳು ಈವರೆಗೆ ಸಂಗೀತಾರನ್ನು ನೇರವಾಗಿ ಸಂಪರ್ಕಿಸಿಲ್ಲ,ಪರಿಸ್ಥಿತಿಯನ್ನು ಪರಿಶೀಲಿಸಿಯೂ ಇಲ್ಲ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News