ಮತದಾರರ ಪಟ್ಟಿಯಿಂದ ನನ್ನ ಪತ್ನಿಯ ಹೆಸರನ್ನು ಅಳಿಸಲು ಬಿಜೆಪಿಯಿಂದ ಯತ್ನ : ಎಎಪಿ ಸಂಸದ ಸಂಜಯ್ ಸಿಂಗ್ ಆರೋಪ
ಹೊಸದಿಲ್ಲಿ: ವಿಧಾನಸಭಾ ಚುನಾವಣೆಗೆ ಮುನ್ನ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಪತ್ನಿ ಅನಿತಾ ಅವರ ಹೆಸರನ್ನು ಅಳಿಸಲು ಬಿಜೆಪಿ ಯತ್ನಿಸಿದ್ದು, ಈ ಕುರಿತು ಬಿಜೆಪಿ ಎರಡು ಅರ್ಜಿಗಳನ್ನು ಸಲ್ಲಿಸಿದೆ ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ರವಿವಾರ ಆರೋಪಿಸಿದ್ದಾರೆ.
ಡಿಸೆಂಬರ್ 15ರಿಂದ ಬಿಜೆಪಿ ಮತದಾರರ ಪಟ್ಟಿಯನ್ನು ತಿರುಚುತ್ತಿದೆ. ಈ 15 ದಿನಗಳ ಅವಧಿಯಲ್ಲಿ ಬಿಜೆಪಿ 5,000 ಹೆಸರುಗಳನ್ನು ತೆಗೆದುಹಾಕಲು ಮತ್ತು 7,500 ಹೊಸ ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಿದೆ. ಒಟ್ಟು ಮತದಾರರಲ್ಲಿ ಸರಿಸುಮಾರು 12% ಮತದಾರರ ಹಕ್ಕನ್ನು ನೀವು ಕಸಿದುಕೊಳ್ಳುತ್ತಿದ್ದರೆ ಚುನಾವಣೆ ನಡೆಸುವ ಅಗತ್ಯವೇನಿದೆ? ಇದು ಚುನಾವಣೆಯ ಹೆಸರಿನಲ್ಲಿ ನಡೆಯುವ ಆಟವಲ್ಲದೆ ಬೇರೇನೂ ಅಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, ನನ್ನ ಪತ್ನಿ ಅನಿತಾ ಸಿಂಗ್ ಸೇರಿದಂತೆ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರತಿನಿಧಿಸುವ ಹೊಸದಿಲ್ಲಿ ಕ್ಷೇತ್ರದ ಮತದಾರರ ಪಟ್ಟಿಯಿಂದ ತನ್ನ ಪತ್ನಿಯ ಹೆಸರನ್ನು ಅಳಿಸಲು ಡಿಸೆಂಬರ್ 25 ಮತ್ತು 26ರಂದು ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ದಿಲ್ಲಿಯಲ್ಲಿ ಮತದಾರರ ಪಟ್ಟಿಯಿಂದ ಪೂರ್ವಾಂಚಲಿ ಮತದಾರರ ಹೆಸರನ್ನು ಅಳಿಸಲಾಗಿದೆ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಕೇಸರಿ ಪಾಳಯವು ತನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.