ತ್ರಿಪುರಾ: ಬಿಜೆಪಿ-ತಿಪ್ರಾ ಮೋಥಾ ಪಕ್ಷದ ನಡುವೆ ಘರ್ಷಣೆ; ಪೊಲೀಸರು ಸಹಿತ 12 ಮಂದಿಗೆ ಗಾಯ
ಅಗರ್ತಲಾ: ತ್ರಿಪುರಾದ ಸಿಪಾಹಿಜಾಲ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷವಾದ ತಿಪ್ರಾ ಮೋಥಾ ನಡುವೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಡೆಸಿದ ವಿಜಯೋತ್ಸವದ ಸಂದರ್ಭ ಬುಡಕಟ್ಟು ಪ್ರಾಬಲ್ಯದ ಜಂಪುಯಿಜಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
‘‘ತಿಪ್ರಾ ಮೋಥಾ ಕಾರ್ಯಕರ್ತರ ಗುಂಪು ಬಿಜೆಪಿಯ ಕೆಲವು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ತಡೆ ಒಡ್ಡಿದ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ’’ ಎಂದು ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜನರಲ್ (ಕಾನೂನು ಹಾಗೂ ಸುವ್ಯವಸ್ಥೆ) ಜ್ಯೋತಿಷ್ಮನ್ ದಾಸ್ ಚೌಧುರಿ ಹೇಳಿದ್ದಾರೆ.
ಘರ್ಷಣೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.