Fact Check : ಉನ್ನಾಂವ್ ನಲ್ಲಿ ಬೆಂಕಿ ಹೊತ್ತಿಕೊಂಡ ಟ್ರಕ್ ಅಯೋಧ್ಯೆಗೆ ತೆರಳುತ್ತಿತ್ತೇ?
ಹೊಸದಿಲ್ಲಿ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಟ್ರಕ್ ಒಂದಕ್ಕೆ ಬೆಂಕಿ ಹೊತ್ತಿಕೊಂಡಿರುವ ಚಿತ್ರವು ವೈರಲ್ ಆಗಿದೆ. ವರದಿಗಳ ಪ್ರಕಾರ, ಆ ಟ್ರಕ್ ನಲ್ಲಿ ಹೊತ್ತೊಯ್ಯುತ್ತಿದ್ದ ಪಟಾಕಿಗಳು ಸ್ಫೋಟಿಸಿದ್ದರಿಂದ ಉತ್ತರ ಪ್ರದೇಶದ ಉನ್ನಾಂವ್ ಜಿಲ್ಲೆಯಲ್ಲಿ ಟ್ರಕ್ ಬೆಂಕಿಯ ಜ್ವಾಲೆಗೆ ಆಹುತಿಯಾಗಿದೆ ಎಂದು ಹೇಳಲಾಗಿತ್ತು.
ಬೆಂಕಿ ಹತ್ತಿಕೊಂಡ ಟ್ರಕ್ ಅಯೋಧ್ಯೆಗೆ ತೆರಳುತ್ತಿತ್ತು ಹಾಗೂ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಅಗತ್ಯವಾದ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿತ್ತು ಎಂದು ಎನ್‍ಡಿಟಿವಿ, ಇಂಡಿಯಾ ಟುಡೆ, ಬಿಸಿನೆಸ್ ಸ್ಟ್ಯಾಂಡರ್ಡ್, ರಿಪಬ್ಲಿಕ್, ಮಿಂಟ್, ಲೋಕಮತ್ ಟೈಮ್ಸ್, ಬ್ರೂಟ್ ಇಂಡಿಯಾ, ಮಿರರ್ ನೌನಂತಹ ಹಲವಾರು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.
ಈ ಘಟನೆ ಕುರಿತ ವರದಿಗಳು ಉತ್ತರ ಪ್ರದೇಶದ ಉನ್ನಾಂವ್ ಜಿಲ್ಲೆಯಲ್ಲಿ ಟ್ರಕ್ ಗೆ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಿದ್ದವು. ಈ ಕುರಿತು ಸೂಕ್ತ ಕೀವರ್ಡ್ ಶೋಧನೆಗಳನ್ನು ನಡೆಸಿದಾಗ, “ತಮಿಳುನಾಡಿನಿಂದ ಬಹ್ರೈಚ್ ಗೆ ಪಟಾಕಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಗೆ ಬೆಂಕಿ” ಎಂಬ ಶೀರ್ಷಿಕೆ ಹೊಂದಿದ್ದ ವರದಿಯನ್ನು The Times of India ಪತ್ರಿಕೆ ವರದಿ ಮಾಡಿರುವುದು ಕಂಡು ಬಂದಿದೆ. ಆ ವರದಿಯಲ್ಲಿ ತಮಿಳುನಾಡಿನಿಂದ ಉತ್ತರ ಪ್ರದೇಶದ ಬಹ್ರೈಚ್ ಗೆ ಪಟಾಕಿಗಳನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಹೇಳಲಾಗಿದೆಯೆ ಹೊರತು, ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿತ್ತು ಎಂದು ಹೇಳಲಾಗಿಲ್ಲ ಎಂದು altnews.in ಸತ್ಯಶೋಧನಾ ವೇದಿಕೆ ಬಯಲು ಮಾಡಿದೆ.
ಆ ವರದಿಯಲ್ಲಿ ಟ್ರಕ್ ನಲ್ಲಿ ಸಂಭವಿಸಿರುವ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿರಬಹುದು ಎಂದು ಪೂರ್ವ ಪೊಲೀಸ್ ಠಾಣೆಯ ವೃತ್ತಾಧಿಕಾರಿ ಸೋನಮ್ ಸಿಂಗ್ ಹೇಳಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ. ಈ ಕುರಿತು ಸೋನಮ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, TOI ಸುದ್ದಿ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳನ್ನೇ ಅವರು ಪುನರುಚ್ಚರಿಸಿದ್ದು, ತಮಿಳುನಾಡಿನಿಂದ ಆಗಮಿಸುತ್ತಿದ್ದ ಆ ಟ್ರಕ್ ಬಹ್ರೈಚ್ ಗೆ ತೆರಳುತ್ತಿತ್ತೇ ಹೊರತು ಅಯೋಧ್ಯೆಗಲ್ಲ ಎಂದು ದೃಢಪಡಿಸಿದ್ದಾರೆ ಎಂದು altnews.in ವರದಿ ಮಾಡಿದೆ.
ಘಟನೆಯ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಉನ್ನಾಂವ್ ಪೊಲೀಸರು, ಸದರಿ ಟ್ರಕ್ ಬಹ್ರೈಚ್ ಗೆ ತೆರಳುತ್ತಿತ್ತು ಹಾಗೂ ಅದು ಪಟಾಕಿಗಳು ಹಾಗೂ ನಟರ, ಮಕ್ಕಳ ಮತ್ತು ಧಾರ್ಮಿಕ ಸಮಾರಂಭಗಳ ಭಿತ್ತಿ ಪತ್ರಗಳನ್ನು ಅಂಗಡಿಗಳಿಗೆ ಪೂರೈಸಲು ತನ್ನೊಂದಿಗೆ ಕೊಂಡೊಯ್ಯುತ್ತಿತ್ತು ಎಂದು ಹೇಳಿದ್ದಾರೆ.
ಹೀಗಾಗಿ, ಬೆಂಕಿ ಹೊತ್ತಿಕೊಂಡಿದ್ದ ಟ್ರಕ್ ಬಹ್ರೈಚ್ ಗೆ ತೆರಳುತ್ತಿತ್ತೇ ಹೊರತು ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರಲಿಲ್ಲ ಎಂಬುದು ದೃಢಪಟ್ಟಿದೆ.