ಸೈಬರ್ ಕ್ರೈಂ | 5,000 ರೂ. ಉಳಿಸಲು ಹೋಗಿ 6 ಲಕ್ಷ ರೂ. ಕಳೆದುಕೊಂಡ ಮಹಿಳೆ!
ಮುಂಬೈ: ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು 5,000 ರೂ.ಉಳಿಸಲು ಹೋಗಿ ಸೈಬರ್ ವಂಚಕರ ಜಾಲಕ್ಕೆ ಬಿದ್ದು ರೂ. 6 ಲಕ್ಷ ಕಳೆದುಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಮಹಿಳೆಯು ಘಟ್ಕೋಪುರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಘಟ್ಕೋಪುರ್ ನ ಪೂರ್ವ ಉಪ ನಗರವಾದ ಚಿರಾಗ್ ನಗರ್ ಪ್ರದೇಶದ ನಿವಾಸಿಯಾದ ಮಹಿಳೆಯು, ಸೆಪ್ಟೆಂಬರ್ 26ರಂದು ಎಟಿಎಂನಿಂದ 5,000 ರೂ.ವಿತ್ ಡ್ರಾ ಮಾಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕ್ ನ ಮೊಬೈಲ್ ಆ್ಯಪ್ ಮೂಲಕ ಅವರು ಕಾರ್ಡ್ ಲೆಸ್ ಆಯ್ಕೆ ಬಳಸಿ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಆದರೆ, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ, ನಿಮ್ಮ ಹಣವನ್ನು ಯುಪಿಐ ಮೂಲಕ ‘kerlacmdrf.covid@icici’ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳಿಸಲಾಗಿದೆ ಎಂಬ ಸಂದೇಶವನ್ನು ಅವರು ಸ್ವೀಕರಿಸಿದ್ದಾರೆ.
ಮರು ದಿನ ಆ ಮಹಿಳೆಯು UPI ಸಹಾಯವಾಣಿಯನ್ನು ಹುಡುಕಾಡಲು ಗೂಗಲ್ ಮೊರೆ ಹೋಗಿದ್ದಾರೆ. ಗೂಗಲ್ ಸರ್ಚ್ ಗಳ ಪೈಕಿ ‘1800-41-2222-32’ ಸಂಖ್ಯೆಯನ್ನು UPI ಸಹಾಯವಾಣಿ ಸಂಖ್ಯೆ ಎಂದೂ ಗೂಗಲ್ ತೋರಿಸಿದೆ.
ಈ ಸಂಖ್ಯೆಯನ್ನು ನೈಜ ಎಂದು ನಂಬಿದ ಮಹಿಳೆಯು, ಆ ಸಂಖ್ಯೆಗೆ ಕರೆ ಮಾಡಿದ್ದಾರೆ. ಆಗ ಅತ್ತಲಿಂದ ಸುರೇಶ್ ಶರ್ಮ ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿಯೊಬ್ಬ, ತನ್ನನ್ನು ತಾನು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ ಬಾಂದ್ರಾ ಶಾಖೆಯ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ. ನಂತರ ಮತ್ತೊಂದು ಸಂಖ್ಯೆಯಿಂದ ನಿಮಗೆ ಕರೆ ಬರುತ್ತದೆ ಎಂದು ಆಕೆಗೆ ತಿಳಿಸಿದ್ದಾನೆ.
ಇದಾದ ನಂತರ, ತನ್ನನ್ನು ತಾನು ಅಮಿತ್ ಯಾದವ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ, ನಿಮ್ಮ ಮೊಬೈಲ್ ಫೋನ್ ನಲ್ಲಿ ಒಂದು ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು, ನಿಮ್ಮ ಮೊಬೈಲ್ ಫೋನ್ ಗೆ ಪ್ರವೇಶಿಸಿ ನೆರವು ನೀಡಲು ನನಗೆ ಅವಕಾಶ ನೀಡಿ ಎಂದು ಕೋರಿದ್ದಾನೆ. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿರುವ ಆತ, ಪಾಸ್ ವರ್ಡ್ ಪ್ಯಾನ್ ಮತ್ತು UPI ಖಾತೆಗಳ ಮಾಹಿತಿಗಳನ್ನು ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಮಾಹಿತಿಗಳನ್ನೆಲ್ಲ ಹಂಚಿಕೊಂಡ ಕೂಡಲೇ ಮಹಿಳೆಯ ಬ್ಯಾಂಕ್ ಖಾತೆಯಿಂದ ರೂ. 93,062 ಕಡಿತಗೊಂಡಿದೆ. ಈ ಮೊತ್ತವು ವಿರೇಂದ್ರ ರಾಯ್ಕರ್ ಎಂಬ ವ್ಯಕ್ತಿಯ ಖಾತೆಗೆ ವರ್ಗಾವಣೆಗೊಂಡಿದೆ.
ನಿಮ್ಮ ಹೆಸರಿನಲ್ಲಿ ಮತ್ತೊಂದು ಖಾತೆಯನ್ನು ತೆರೆಯಲಾಗಿದ್ದು, ಆ ಖಾತೆಗೆ ಕಡಿತಗೊಂಡಿರುವ ಎಲ್ಲ ಮೊತ್ತವನ್ನು 24 ಗಂಟೆಗಳೊಳಗಾಗಿ ವರ್ಗಾಯಿಸಲಾಗುವುದು ಎಂದು ಯಾದವ್ ಆ ಮಹಿಳೆಗೆ ತಿಳಿಸಿದ್ದಾನೆ.
ಸೆಪ್ಟೆಂಬರ್ 28ರಂದು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ ಸಹಾಯವಾಣಿಯನ್ನು ಸಂಪರ್ಕಿಸಿರುವ ಮಹಿಳೆಯು, ನನ್ನ ಹಣವನ್ನು 24 ಗಂಟೆಗಳೊಳಗೆ ವರ್ಗಾಯಿಸಿಲ್ಲ ಎಂದು ಸುರೇಶ್ ಶರ್ಮಗೆ ದೂರು ನೀಡಿದ್ದಾಳೆ.
ನಂತರ ರಾಕೇಶ್ ಕುಮಾರ್ ದೋಸರ ಎಂಬ ವ್ಯಕ್ತಿಗೆ ಶರ್ಮ ಕರೆಯನ್ನು ವರ್ಗಾಯಿಸಿದ್ದು, ಆತ ಕೂಡಾ ಆಕೆಯ ಎಲ್ಲ ವಿವರಗಳನ್ನು ಪಡೆದುಕೊಂಡಿದ್ದಾನೆ. ಮತ್ತೆ, ಆಕೆಯ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಮತ್ತೆ ಮತ್ತೆ ಪುನರಾವರ್ತನೆಗೊಂಡಿದ್ದು, ದೂರುದಾರ ಮಹಿಳೆಯು ಸೆಪ್ಟೆಂಬರ್ 16 ರಿಂದ 20ರ ನಡುವೆ ಸುಮಾರು ರೂ. 6 ಲಕ್ಷ ಮೊತ್ತವನ್ನು ಕಳೆದುಕೊಂಡಿದ್ದಾರೆ. ನಂತರ, ತಾನು ಸೈಬರ್ ವಂಚಕರ ಬಲೆಗೆ ಬಿದ್ದಿದ್ದೇನೆ ಎಂದು ಮನವರಿಕೆಯಾಗಿರುವ ಮಹಿಳೆಯು, ಬುಧವಾರ ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಸಂಬಂಧ ವಂಚನೆಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.