ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಮೃತ್ಯು
ಕೊಯಂಬತ್ತೂರು: ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ, ವಿದ್ಯುತ್ ತಂತಿ ತಾಕಿದ್ದ ಕ್ರೀಡಾ ಸಾಧನವೊಂದನ್ನು ಮುಟ್ಟಿ ಇಬ್ಬರು ಮಕ್ಕಳು ವಿದ್ಯುದಾಘಾತಕ್ಕೆ ಬಲಿಯಾಗಿರುವ ಘಟನೆ ಗುರುವಾರ ಕೊಯಂಬತ್ತೂರಿನ ಸರವಣಂಪಟ್ಟಿಯ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ. ಸೇನಾ ಕಲ್ಯಾಣ ವಸತಿ ಸಂಘವು ಈ ಅಪಾರ್ಟ್ ಮೆಂಟ್ ನ ಮಾಲಕತ್ವ ಹೊಂದಿದೆ. ಈ ಘಟನೆಯು ತುದಿಯಲೂರ್ ರಸ್ತೆಯ ರಾಮನ್ ವಿಹಾರ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದಕ್ಕೆ ಹೊಂದಿಕೊಂಡಿರುವ ಉದ್ಯಾನವನದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಸಂಜೆ 6.30ರ ಸುಮಾರಿಗೆ ನಡೆದಿದ್ದು, ಕೂಡಲೇ ವಸತಿ ಗೃಹದ ನಿವಾಸಿಗಳು ವಿದ್ಯುದಾಘಾತಕ್ಕೆ ಗುರಿಯಾಗಿದ್ದ ಮಕ್ಕಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆದರೆ, ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತ ಮಕ್ಕಳನ್ನು ಬಾಲಚಂದರ್ ಎಂಬುವವರ ಪುತ್ರಿ ವಿಯೋಮಾ ಪ್ರಿಯ (8) ಹಾಗೂ ಜಿಯನೇಶ್ ಎಂಬುವವರ ಪುತ್ರ ಪ್ರಶಾಂತ್ (6) ಎಂದು ಗುರುತಿಸಲಾಗಿದೆ. ಪ್ರತ್ಯೇಕ ಖಾಸಗಿ ಶಾಲೆಗಳಲ್ಲಿ ಮೃತ ಬಾಲಕಿ ಹಾಗೂ ಬಾಲಕನು ಕ್ರಮವಾಗಿ ಮೂರನೆಯ ತರಗತಿ ಹಾಗೂ ಎಲ್ಕೆಎಜಿ ವ್ಯಾಸಂಗ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಉದ್ಯಾನವನದ ವಿದ್ಯುತ್ ತಂತಿಯು ಹಾನಿಗೊಳಗಾಗಿ ಕ್ರೀಡಾ ಸಾಧನದ ಸಂಪರ್ಕಕ್ಕೆ ಬಂದಿತ್ತು. ಈ ಸಾಧನ ಮುಟ್ಟಿದ ಬಾಲಕಿಯು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಘಟನೆಯ ಕುರಿತು ಸರವಣಂಪಟ್ಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.