ನಮ್ಮೆದುರು ಯಾರೇ ನಿಂತರೂ ಗೆಲ್ಲುವುದು ನಾವೇ : ವಿಜಯ್, ಟಿವಿಕೆಗೆ ಉದಯನಿಧಿ ಸ್ಟಾಲಿನ್ ಎಚ್ಚರಿಕೆ

Update: 2024-11-06 15:36 GMT

ಉದಯನಿಧಿ ಸ್ಟಾಲಿನ್,  ವಿಜಯ್‌ | PTI

ಚೆನ್ನೈ : 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿಂದಲೇ ವಿರೋಧ ಎದುರಾದರೂ ಡಿಎಂಕೆ ಪಕ್ಷವೇ ಗೆಲ್ಲಲಿದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ನಟ-ರಾಜಕಾರಣಿ ವಿಜಯ್‌ ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

‘ದಳಪತಿ’ ಎಂದೇ ಖ್ಯಾತರಾಗಿರುವ ವಿಜಯ್ ಅ.27ರಂದು ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ತನ್ನ ನೂತನ ಪಕ್ಷ ’ತಮಿಳಿಗ ವೆಟ್ರಿ ಕಳಗಂ(ಟಿವಿಕೆ)’ನ ಉದ್ಘಾಟನಾ ಸಮಾವೇಶವನ್ನು ನಡೆಸಿದ್ದರು. ತನ್ನ ಚೊಚ್ಚಲ ರಾಜಕೀಯ ಭಾಷಣದಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ ವಿರುದ್ಧ ಅವುಗಳನ್ನು ಹೆಸರಿಸದೆ ತೀವ್ರ ವಾಗ್ದಾಳಿ ನಡೆಸಿದ್ದರು.

ಆಗಿನಿಂದ ತಮಿಳುನಾಡಿನ ರಾಜಕೀಯ ನಾಯಕರು, ವಿಶೇಷವಾಗಿ ಡಿಎಂಕೆ ನಾಯಕರು ವಿಜಯ್ ಅವರ ಭಾಷಣ ಮತ್ತು ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ.

ವಿಲ್ಲುಪುರಮ್‌ ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಉದಯನಿಧಿ ವಿಜಯ್‌ ರ ರಾಜಕೀಯ ಪ್ರವೇಶವನ್ನು ಬೆಟ್ಟು ಮಾಡಿ,‘2026ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ವಿರೋಧಿಸಲು ಯಾರೇ ನಿರ್ಧರಿಸಿದರೂ, ಅವರು ಯಾವುದೇ ಮೈತ್ರಿಕೂಟವನ್ನು ರಚಿಸಿಕೊಂಡರೂ, ಅವರು ದಿಲ್ಲಿ ಅಥವಾ ಸ್ಥಳೀಯ ಹೀಗೆ ಯಾವುದೇ ದಿಕ್ಕಿನಿಂದಲೂ ಬಂದರೂ ಗೆಲ್ಲುವುದು ಮಾತ್ರ ಡಿಎಂಕೆ ’ ಎಂದು ಪ್ರತಿಪಾದಿಸಿದರು.

ಸುದೀರ್ಘ ಸಮಯದಿಂದ ವಿಜಯ್ ಮಿತ್ರರಾಗಿರುವ ಉದಯನಿಧಿ, ಅವರ ಚೊಚ್ಚಲ ರಾಜಕೀಯ ಸಮಾವೇಶಕ್ಕೆ ಶುಭ ಹಾರೈಸಿದ್ದರು.‘ವಿಜಯ್ ಹಲವಾರು ವರ್ಷಗಳಿಂದಲೂ ನನ್ನ ಸ್ನೇಹಿತನಾಗಿದ್ದಾರೆ. ಅವರನ್ನು ನಾನು ಬಾಲ್ಯದಿಂದಲೂ ಬಲ್ಲೆ. ನನ್ನ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾದಲ್ಲಿ ಅವರು ನಟಿಸಿದ್ದರು ಮತ್ತು ನನ್ನ ಆಪ್ತಮಿತ್ರನಾಗಿದ್ದಾರೆ. ಅವರ ಈ ಹೊಸ ಸಾಹಸದಲ್ಲಿ ಅವರಿಗೆ ಯಶಸ್ಸನ್ನು ಹಾರೈಸುತ್ತೇನೆ’ ಎಂದು ಹೇಳಿದ್ದರು.

ವಿಜಯ್ ರಾಜಕೀಯ ಭಾಷಣದ ಬಳಿಕ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅದು ಸಿದ್ಧಾಂತಗಳ ಮಿಶ್ರಣ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದರೆ ಅದನ್ನು ಪ್ರತಿಧ್ವನಿಸಿದ್ದ ಪುತ್ರ ಕಾರ್ತಿ ಪಿ.ಚಿದಂಬರಂ, ಟಿವಿಕೆ ಡಿಎಂಕೆಯ ಮತಗಳ ಪಾಲಿಗೆ ಚ್ಯುತಿಯನ್ನುಂಟು ಮಾಡುವುದಿಲ್ಲ ಎಂದಿದ್ದರು.

ಬಿಜೆಪಿ ರಜನೀಕಾಂತರನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸಿತ್ತು. ಆದರೆ ಅವರು ಬರಲಿಲ್ಲ. ಈಗ ಅವರ ಬದಲಿಗೆ ವಿಜಯ್‌ ರನ್ನು ತಂದಿದೆ ಎಂದು ತಮಿಳುನಾಡು ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಹೇಳಿದ್ದರು.

ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರೂ ವಿಜಯ್ ಟೀಕೆಗೆ ಪ್ರತಿಕ್ರಿಯಿಸಿದ್ದರು. ತನ್ನ ನಾಲ್ಕು ವರ್ಷಗಳ ಸರಕಾರದ ಯಶಸ್ಸನ್ನು ಸಮರ್ಥಿಸಿಕೊಂಡಿದ್ದ ಅವರು, ಅದರ ವೈಫಲ್ಯದ ಕಲ್ಪನೆಯನ್ನು ತಳ್ಳಿಹಾಕಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News