ಉದ್ಧವ್ ಠಾಕ್ರೆ ವಿಶ್ವಾಸ ದ್ರೋಹದ ಸಂತ್ರಸ್ತ | ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

Update: 2024-07-15 14:16 GMT

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ | PTI

ಮುಂಬೈ: ಉದ್ಧವ್ ಠಾಕ್ರೆ ವಿಶ್ವಾಸ ದ್ರೋಹದ ಸಂತ್ರಸ್ತ ಎಂದು ಸೋಮವಾರ ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮುನ್ನ, ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಮಂತ್ರಣವನ್ನು ತಿರಸ್ಕರಿಸಿ ಸ್ವಾಮಿ ಅವಿಮುಕ್ತೇಶ್ವರಾನಂದ ಸುದ್ದಿಯಾಗಿದ್ದರು.

ಬಾಂದ್ರಾದಲ್ಲಿನ ಉದ್ಧವ್ ಠಾಕ್ರೆಯವರ ನಿವಾಸವಾದ ಮಾತೋಶ್ರೀಯಲ್ಲಿ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉದ್ಧವ್ ಠಾಕ್ರೆಗೆ ವಿಶ್ವಾಸ ದ್ರೋಹವಾಗಿದೆ ಮತ್ತು ಇದರಿಂದ ಹಲವರು ಆಕ್ರೋಶಗೊಂಡಿದ್ದಾರೆ. ಅವರ ಮನವಿಯ ಮೇರೆಗೆ ಇಂದು ನಾನವರನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ನೀವು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಜನರ ನೋವು ಪರಿಹಾರವಾಗುವುದಿಲ್ಲ ಎಂದು ನಾನವರಿಗೆ ಹೇಳಿದೆ" ಎಂದು ತಿಳಿಸಿದ್ದಾರೆ.

"ನಮ್ಮ ಆಶೀರ್ವಾದದಂತೆ ಏನು ಬೇಕೋ ಅದೆಲ್ಲವನ್ನೂ ನಾನು ಮಾಡಲು ಸಿದ್ಧ ಎಂದು ಉದ್ಧವ್ ಠಾಕ್ರೆ ಹೇಳಿದರು" ಎಂದೂ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

"ವಿಶ್ವಾಸ ದ್ರೋಹ ಬಹು ದೊಡ್ಡ ಪಾಪ" ಎಂದು ಹೇಳಿದ ಅವರು, "ವಿಶ್ವಾಸ ದ್ರೋಹ ಎಸಗುವವನು ಹಿಂದೂ ಆಗಲಾರ. ವಿಶ್ವಾಸ ದ್ರೋಹವನ್ನು ಸಹಿಸುವವನು ಹಿಂದೂ. ಮಹಾರಾಷ್ಟ್ರದ ಸಂಪೂರ್ಣ ಜನತೆ ವಿಶ್ವಾಸ ದ್ರೋಹದಿಂದ ಆಕ್ರೋಶಗೊಂಡಿದ್ದಾರೆ ಹಾಗೂ ಇದು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲನಗೊಂಡಿದೆ" ಎಂದೂ ಹೇಳಿದ್ದಾರೆ.

"ನಮಗೆ ರಾಜಕೀಯದಲ್ಲಿ ಮಾಡಬೇಕಾದ್ದು ಏನು ಇಲ್ಲ. ಆದರೆ, ಧಾರ್ಮಿಕವಾಗಿ ಪಾಪವಾಗಿರುವ ವಿಶ್ವಾಸ ದ್ರೋಹದ ಕುರಿತು ಮಾತ್ರ ನಾವು ಮಾತನಾಡುತ್ತಿದ್ದೇವೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News