ನಿರುದ್ಯೋಗ, ಬೆಲೆ ಏರಿಕೆ ದೇಶದ ಅತಿ ದೊಡ್ಡ ಸಮಸ್ಯೆ: ಪ್ರಿಯಾಂಕಾ ಗಾಂಧಿ
ಗುವಾಹಟಿ : ನಿರುದ್ಯೋಗ ಹಾಗೂ ಬೆಲೆ ಏರಿಕೆ ದೇಶದ ಅತಿ ದೊಡ್ಡ ಸಮಸ್ಯೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಹೇಳಿದ್ದಾರೆ.
‘ಇಂಡಿಯಾ’ ಮೈತ್ರಿಕೂಟಕ್ಕೆ ಬೆಂಬಲ ಅಂತರ್ಗತವಾಗಿ ಹರಿಯುತ್ತಿದ್ದು, ಇದರಿಂದ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಭೂತಪೂರ್ವ ಜಯ ಗಳಿಸಲಿದೆ ಎಂಬ ಆತ್ಮವಿಶ್ವಾಸ ತನಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ಆಪ್ ಅಭ್ಯರ್ಥಿಗೆ ಹಾಗೂ ಆಪ್ ನಾಯಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ನಾವು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮತ ಹಾಕುತ್ತಿದ್ದೇವೆ ಎಂದು ಭಾವಿಸಬೇಕು. ಈ ಬಗ್ಗೆ ನಾನು ಹೆಮ್ಮೆ ಪಟ್ಟುಕೊಳ್ಳುತ್ತೇನೆ” ಎಂದಿದ್ದಾರೆ.
ಬಿಜೆಪಿ ನಾಯಕರು ಎಲ್ಲಾ ವಿಷಯಗಳ ಕುರಿತು ಮಾತನಾಡುತ್ತಾರೆ. ಆದರೆ, ಮುಖ್ಯ ವಿಷಯವಾದ ನಿರುದ್ಯೋಗ ಹಾಗೂ ಬೆಲೆ ಏರಿಕೆ ಕುರಿತು ಮಾತನಾಡುತ್ತಿಲ್ಲ. ಇದರಿಂದ ಜನರು ಬೇಸರಗೊಂಡಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪರ ಯಾವ ಅಂಶ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾವು ಆರಂಭದಿಂದಲೂ ಜನರ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದೇವೆ ಹಾಗೂ ಪ್ರಚಾರ ಮಾಡುತ್ತಿದ್ದೇವೆ. ನಮ್ಮ ಪ್ರಣಾಳಿಕೆ ಕೂಡ ಇದೇ ವಿಷಯದ ಕುರಿತಂತೆ ಇದೆ’’ ಎಂದರು.
‘‘ಜನರು ಬಂದು ಮತ ಹಾಕಬೇಕು ಎಂದು ನಾನು ಬಯಸುತ್ತೇನೆ. ಇದು ನನ್ನ ಏಕೈಕ ಸಂದೇಶ’’ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.