ಪುಣೆ: ಬಿಜೆಪಿ ಎಂಎಲ್ಸಿ ಯೋಗೇಶ್ ತಿಲೇಕರ್ ರ ಚಿಕ್ಕಪ್ಪನ ಅಪಹರಿಸಿ ಕೊಲೆ
ಪುಣೆ: ಕೆಲ ಅಪರಿಚಿತ ವ್ಯಕ್ತಿಗಳು ಬಿಜೆಪಿ ಎಂಎಲ್ಸಿ ಯೋಗೇಶ್ ತಿಲೇಕರ್ ರ ಚಿಕ್ಕಪ್ಪನನ್ನು ಅಪಹರಿಸಿ, ನಂತರ ಹತ್ಯೆಗೈದಿರುವ ಘಟನೆ ಪುಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳಿದ್ದ 56 ವರ್ಷದ ಸತೀಶ್ ವಾಘ್ ರನ್ನು ನಾಲ್ಕೈದು ಮಂದಿ ಅಪರಿಚಿತರು ಪುಣೆ ನಗರದ ಹದಾಪ್ಸರ್ ಪ್ರದೇಶದಲ್ಲಿನ ಶೆವಲ್ವಾಡಿ ಬಳಿ ಕಾರೊಂದರಲ್ಲಿ ಅಪಹರಿಸಿದ್ದರು. ಹೀಗಾಗಿ, ಸತೀಶ್ ವಾಘ್ ರ ಪತ್ತೆಗೆ ಪೊಲೀಸರು ವಿವಿಧ ತಂಡಗಳನ್ನು ರಚಿಸಿದ್ದರು.
ಆದರೆ, ಸೋಮವಾರ ಸಂಜೆ ತಾವು ಅಪಹರಣಕ್ಕೀಡಾಗಿದ್ದ ಸ್ಥಳದಿಂದ ಸುಮಾರು 40 ಕಿಮೀ ದೂರವಿರುವ ಪುಣೆ ಜಿಲ್ಲೆಯ ಪುಣೆ-ಸೊಲ್ಲಾಪುರ ಹೆದ್ದಾರಿಯ ಯಾವತ್ ಬಳಿ ಸತೀಶ್ ವಾಘ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮನೋಜ್ ಪಾಟೀಲ್ ತಿಳಿಸಿದ್ದಾರೆ.
“ದೇಹದ ಮೇಲೆ ಹಲವಾರು ಗಾಯಗಳಾಗಿವೆ. ಆರೋಪಿಗಳನ್ನು ಸೆರೆ ಹಿಡಿಯಲು ಹಲವಾರು ತಂಡಗಳನ್ನು ರಚಿಸಲಾಗಿದೆ. ಪಂಚನಾಮೆಯನ್ನು ನಡೆಸಲು ಸ್ಥಳಕ್ಕೆ ತಂಡವೊಂದು ತೆರಳಿದೆ” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ನಮಗೆ ಯಾರಿಂದಲೂ ಹಣಕ್ಕಾಗಿ ಬೆದರಿಕೆಯ ಕರೆ ಬಂದಿಲ್ಲ ಅಥವಾ ನಮಗೆ ಯಾರ ಬಗ್ಗೆಯೂ ಸಂಶಯವಿಲ್ಲ ಎಂದು ಸೋಮವಾರ ಬೆಳಗ್ಗೆ ಸತೀಶ್ ವಾಘ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸತೀಶ್ ವಾಘ್ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು ಹಾಗೂ ಶೆವಲ್ವಾಡಿ ಬಳಿ ಹೋಟೆಲ್ ಒಂದನ್ನೂ ಹೊಂದಿದ್ದರು ಎನ್ನಲಾಗಿದೆ.