ಚುನಾವಣಾ ಜಾಗೃತಿ ಅಭಿಯಾನದ ಮೂಲಕ ಮೊದಲ ಮತದಾರರ ವಿಳಾಸ, ಬ್ಯಾಂಕ್ ವಿವರಗಳನ್ನು ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರ: ಆರೋಪ

Update: 2024-03-13 08:06 GMT

Photo: mygov.in

ಹೊಸದಿಲ್ಲಿ: ಕೇಂದ್ರ ಸರ್ಕಾರವು ತನ್ನ “ಮೇರಾ ಪೆಹ್ಲಾ ವೋಟ್‌ ದೇಶ್‌ ಕೇ ಲಿಯೇ” (ನನ್ನ ಮೊದಲ ಮತ ದೇಶಕ್ಕಾಗಿ) ಎಂಬ ಅಭಿಯಾನದ ಮೂಲಕ ಮೊದಲ ಬಾರಿಯ ಮತದಾರರ ಮಾಹಿತಿಯನ್ನು ಕ್ರೋಢೀಕರಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಸಾಕೇತ್‌ ಗೋಖಲೆ ಆರೋಪಿಸಿದ್ದಾರೆ.

ಈ ಅಭಿಯಾನವು ಸಂಪೂರ್ಣವಾಗಿ ಒಂದು ಮೋದಿ ಸರ್ಕಾರದ ಅಭಿಯಾನವಾಗಿದ್ದು ಹಾಗೂ ಈ ಮೂಲಕ ಮತದಾರರ ಹೆಸರು, ಲಿಂಗ ಮತ್ತು ಜನ್ಮದಿನಾಂಕವನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ಧಾರೆ. ಮೊದಲ ಬಾರಿಯ ಮತದಾರರಿಗಾಗಿ MyGov ವೆಬ್‌ಸೈಟ್‌ನಲ್ಲಿ ಮತದಾನ ಮಾಡುವುದಾಗಿ ಹೇಳುವ ಪ್ರತಿಜ್ಞಾವಿಧಿ (ಪ್ಲೆಡ್ಜ್‌ ಟು ವೋಟ್) ಮತ್ತು ರಸಪ್ರಶ್ನೆಯಿದೆ.‌

ಈ ವೆಬ್‌ಸೈಟ್‌ ಪರಿಶೀಲಿಸಿದಾಗ ಈ ಪ್ಲೆಡ್ಜ್‌ ಟು ವೋಟ್‌ ನೋಂದಣಿಗಾಗಿ ಸಂಬಂಧಿತರು ಒಟಿಪಿ ಮೂಲಕ ದೃಢೀಕರಣ ಮಾಡಬೇಕಿದೆ ಹಾಗೂ ಹಲವು ವಿವರಗಳನ್ನು ಕೇಳಲಾಗುತ್ತದೆ. ರಸಪ್ರಶ್ನೆ ವಿಭಾಗದಲ್ಲಿ ಬ್ಯಾಂಕ್‌ ವಿವರಗಳನ್ನೂ ಕೇಳಲಾಗಿದೆ, ಆದರೆ ಈ ವಿವರ ನೀಡುವುದು ಕಡ್ಡಾಯವಲ್ಲ.

ಈ ಅಭಿಯಾನದ ಭಾಗವಾಗಿ ಐದು ಚಟುವಟಿಕೆಗಳಿವೆ. ಮೇರಾ ಪೆಹ್ಲಾ ವೋಟ್‌, ದೇಶ್‌ ಕೆ ಲಿಯೇ ಪ್ಲೆಡ್ಜ್‌ ಅಡಿಯಲ್ಲಿ ಅರ್ಜಿದಾರರ ಹೆಸರು. ಲಿಂಗ, ಜನ್ಮದಿನಾಂಕ, ಪಿನ್‌ ಕೋಡ್‌, ರಾಜ್ಯ, ಜಿಲ್ಲೆ, ಇಮೇಲ್‌ ವಿಳಾಸ ಮತ್ತು ಮೊಬೈಲ್‌ ಸಂಖ್ಯೆ ಕೇಳಲಾಗುತ್ತದೆ. ಒಮ್ಮೆ ವಿವರಗಳನ್ನು ಸಲ್ಲಿಸಿದಾಗ ಯಾವ ಭಾಷೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಎಂದು ಕೇಳಲಾಗುತ್ತದೆ., ನಂತರ ನೋಂದಣಿ ಮಾಡಿದ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ನಂತರ ಪ್ರತಿಜ್ಞೆಯ ಪ್ರಮಾಣಪತ್ರ ನೀಡಲಾಗುತ್ತದೆ.

ಭಾರತದ ಪ್ರಜಾಪ್ರಭುತ್ವದ ಕುರಿತ ರಸಪ್ರಶ್ನೆ ವಿಭಾಗದಲ್ಲಿ ಅರ್ಜಿದಾರರ ವಿಳಾಸ, ಬ್ಯಾಂಕ್‌ ಖಾತೆ ವಿವರಗಳು, ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್‌ ಕೇಳಲಾಗುತ್ತದೆ. ಆದರೆ ಈ ವಿವರ ನೀಡಿಕೆ ಕಡ್ಡಾಯವಲ್ಲ, ಬಹುಮಾನ ಪಡೆಯಲು ಈ ವಿವರ ನೀಡಬೇಕಿದೆ.

ಕೇವಲ ವಿಜೇತರಿಂದ ಬ್ಯಾಂಕ್‌ ಖಾತೆ ವಿವರಗಳನ್ನು ಕೇಳುವ ಬದಲು ಎಲ್ಲರಿಂದಲೂ ಏಕೆ ಕೇಳಲಾಗುತ್ತಿದೆ ಎಂದು ಸಾಕೇತ್‌ ಗೋಖಲೆ ಪ್ರಶ್ನಿಸಿದ್ದಾರಲ್ಲದೆ ಮತದಾರರ ಡೇಟಾ ಕ್ರೋಢೀಕರಣವನ್ನು ಸರ್ಕಾರಿ ಯಂತ್ರ ಬಳಸಿ ಈ ಮೂಲಕ ಮೊದಲ ಬಾರಿಯ ಮತದಾರರನ್ನು ಬಿಜೆಪಿ ತಲುಪುವಂತಾಗಲು ಮಾಡುವ ಯತ್ನವಾಗಿದೆ ಎಂದಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News