ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನು ಕುಕ್ಕರ್ ನಿಂದ ಹೊಡೆದು ಹತ್ಯೆ!
Update: 2023-11-12 03:06 GMT
ಕೌಸುಂಬಿ: ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನು ವ್ಯಕ್ತಿಯೊಬ್ಬ ಕುಕ್ಕರ್ನಿಂದ ಹೊಡೆದು ಸಾಯಿಸಿದ ಅಮಾನುಷ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೌಸಂಬಿ ಜಿಲ್ಲೆಯ ಕುಂದ್ರಾವಿ ಗ್ರಾಮದ ಮದ್ಯವ್ಯಸನಿಯಾಗಿದ್ದ ಪಾಟಾಲಿ ಎಂಬ ವ್ಯಕ್ತಿ ಶುಕ್ರವಾರ ಮದ್ಯಪಾನಕ್ಕಾಗಿ ಪತ್ನಿ ಮೀನಾದೇವಿ (32) ಬಳಿ ಹಣ ಕೇಳಿದ. ಹಣ ನೀಡಲು ನಿರಾಕರಿಸಿದಾಗ ಸಿಟ್ಟಿನಿಂದ ಕುಕ್ಕರ್ ನಿಂದ ಹೊಡೆದು ಸಾಯಿಸಿದ ಎಂದು ಹೆಚ್ಚುವರಿ ಎಸ್ಪಿ ಸಮರ್ ಬಹದ್ದೂರ್ ಸಿಂಗ್ ಹೇಳಿದ್ದಾರೆ. ಪತ್ನಿ ಹಣ ನೀಡದಿದ್ದಾಗ ಮೊದಲು ಪತ್ನಿಯನ್ನು ನಿಂದಿಸಿದ. ಬಳಿಕ ತಲೆಯ ಮೇಲೆ ಕುಕ್ಕರ್ ನಿಂದ ಹೊಡೆದ. ಮೀನಾದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಅವರು ವಿವರಿಸಿದ್ದಾರೆ.
ಭಾವ ನೀಡಿದ ದೂರಿನ ಮೇರೆಗೆ ತಲೆ ಮರೆಸಿಕೊಂಡಿರುವ ಪಾಟಾಲಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಮೀನಾದೇವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯ ಬಂಧನಕ್ಕೆ ಪ್ರಯತ್ನ ನಡೆದಿದೆ ಎಂದು ಸಿಂಗ್ ವಿವರಿಸಿದ್ದಾರೆ.