ಭಾರತ ಸೇನೆಯ ನೂತನ ಮುಖ್ಯಸ್ಥರಾಗಿ ಉಪೇಂದ್ರ ದ್ವಿವೇದಿ ಆಯ್ಕೆ

Update: 2024-06-12 04:54 GMT

PC:X/ANI

ಹೊಸದಿಲ್ಲಿ: ವಿಶ್ವದ ಅತಿದೊಡ್ಡ ಸೇನೆಗಳಲ್ಲಿ ಒಂದಾದ ಭಾರತೀಯ ಸೇನೆಯ ಹೊಸ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆಯವರ ಅಧಿಕಾರಾವಧಿ ಜೂನ್ 30ಕ್ಕೆ ಮುಕ್ತಾಯವಾಗಲಿದೆ.

ಪರಮ ವಿಶಿಷ್ಟ ಸೇವಾ ಪದಕದಿಂದ ಪುರಸ್ಕೃತರಾಗಿರುವ ದ್ವಿವೇದಿ, ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೂನ್ 30ರಂದು ಸಂಜೆ ಅವರು ಜನರಲ್ ಪಾಂಡೆಯವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

1964ರಲ್ಲಿ ಜನಿಸಿದ ಲೆಫ್ಟಿನೆಂಟ್ ಜನರಲ್ ದ್ವಿವೇದಿಯವರು ಜಮ್ಮು & ಕಾಶ್ಮೀರ ರೈಫಲ್ಸ್ ನಲ್ಲಿ 1984ರ ಡಿಸೆಂಬರ್ 15ರಂದು ನಿಯೋಜನೆಗೊಂಡಿದ್ದರು. 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಅವರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಮಾಂಡ್ ಆಫ್ ರೆಜಿಮೆಂಟ್ (18 ಜಮ್ಮು & ಕಾಶ್ಮೀರ ರೈಫಲ್ಸ್), ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಡಿಐಜಿ, ಅಸ್ಸಾಂ ರೈಫಲ್ಸ್ ಮತ್ತಿತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಉತ್ತರ ಕಮಾಂಡ್ ನ ಇನ್ಫ್ಯಾಂಟ್ರಿ ಅಂಡ್ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ನ ಮಹಾನಿರ್ದೇಶಕರಾಗಿ 2022ರಿಂದ 24ರವರೆಗೆ ಕಾರ್ಯನಿರ್ವಹಿಸಿದ ಅವರು ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ ನಿಯೋಜಿತರಾಗಿದ್ದರು.

ರೇವಾ ಸೈನಿಕ ಶಾಲೆಯಲ್ಲಿ, ನ್ಯಾಷನಲ್ ಡಿಫೆನ್ಸ್ ಕಾಲೇಜು ಮತ್ತು ಯುಎಸ್ ಆರ್ಮಿ ವಾರ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದ ಅವರು, ಡಿಎಸ್ಎಸ್ ಸಿ ವೆಲ್ಲಿಂಗ್ಟನ್ ಅಂಡ್ ಆರ್ಮಿ ವಾರ್ ಕಾಲೇಜಿನಲ್ಲಿಯೂ ಕೋರ್ಸ್ ಮುಗಿಸಿದ್ದಾರೆ. ಡಿಫೆನ್ಸ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಎಂಫಿಲ್ ಪದವಿ ಹೊಂದಿರುವ ಅವರು ತಂತ್ರಗಾರಿಕೆ ಅಧ್ಯಯನ ಮತ್ತು ಸೇನಾ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News