ಮಹುವಾ ಮೊಯಿತ್ರಾರ ಸಂಸದೀಯ ಲಾಗಿನ್ ಐಡಿ ದುಬೈಯಲ್ಲಿ ಬಳಕೆ: ನಿಶಿಕಾಂತ್ ದುಬೆ ಆರೋಪ

Update: 2023-10-21 15:07 GMT

(PTI Photo)

ಹೊಸದಿಲ್ಲಿ, ಅ. 21: ಮಹುವಾ ಮೊಯಿತ್ರಾ ಅವರು ಭಾರತದಲ್ಲಿ ಇದ್ದಾಗ ಅವರ ಸಂಸದೀಯ ಐಡಿಯನ್ನು ದುಬೈಯಲ್ಲಿ ಬಳಸಲಾಗುತ್ತಿತ್ತು. ಈ ಮಾಹಿತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ತನಿಖಾ ಸಂಸ್ಥೆಗಳಿಗೆ ತಿಳಿಸಿದೆ ಎಂದು ಬಿಜೆಪಿಯ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಶನಿವಾರ ಹೇಳಿದ್ದಾರೆ.

‘ಎಕ್ಸ್’ (ಈ ಹಿಂದಿನ ಟ್ವಿಟರ್)ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ದುಬೆ, ‘‘ದೇಶದ ಭದ್ರತೆಯನ್ನು ಸಂಸದೆ ಅಡವಿರಿಸಿದ್ದಾರೆ. ಅವರು ಸಂಸತ್ತಿನಲ್ಲಿ ಇರುವಾಗ ಅವರ ಐಡಿಯನ್ನು ದುಬೈಯಲ್ಲಿ ಬಳಸಲಾಗುತ್ತಿತ್ತು. ಪ್ರಧಾನಿ, ಹಣಕಾಸು ಇಲಾಖೆ ಹಾಗೂ ಕೇಂದ್ರೀಯ ಸಂಸ್ಥೆಗಳು ಸೇರಿದಂತೆ ಸಂಪೂರ್ಣ ಭಾರತ ಸರಕಾರ ಈ ಎನ್‌ಐಸಿಯನ್ನು ಬಳಸುತ್ತವೆ’’ ಎಂದಿದ್ದಾರೆ.

‘‘ಟಿಎಂಸಿ ಹಾಗೂ ಪ್ರತಿಪಕ್ಷಗಳೂ ಈಗಲೂ ರಾಜಕೀಯ ಮಾಡಬೇಕೇ?. ಜನರು ನಿರ್ಧಾರ ತೆಗೆದುಕೊಳ್ಳಬೇಕು. ಎನ್‌ಐಸಿ ಈ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡಿದೆ’’ ಎಂದು ದುಬೆ ಹೇಳಿದರು. ಆದರೆ, ಅವರು ತನಿಖಾ ಸಂಸ್ಥೆಯ ಹೆಸರು ಹೇಳಿಲ್ಲ.

ಈ ಪೋಸ್ಟ್‌ನಲ್ಲಿ ದುಬೆ ಅವರು ಲಂಚ ಸ್ವೀಕರಿಸಿದ ಹಾಗೂ ಅದಾನಿ ಸಮೂಹ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿ ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ ಆರೋಪಕ್ಕೆ ಒಳಗಾದ ಮಹುವಾ ಮೊಯಿತ್ರಾ ಅವರ ಹೆಸರನ್ನು ಉಲ್ಲೇಖಿಸಿಲ್ಲ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News