600 ವರ್ಷಗಳಷ್ಟು ಪುರಾತನವಾದ ದರ್ಗಾವನ್ನು ಹಿಂದೂಗಳಿಗೆ ಸ್ಥಳಾಂತರಿಸುವಂತೆ ಮುಸ್ಲಿಮರಿಗೆ ಸೂಚಿಸಿದ ಉತ್ತರ ಪ್ರದೇಶ ನ್ಯಾಯಾಲಯ

Update: 2024-02-06 16:23 GMT

PC: maktoobmedia.com

ಬಾಘ್ಪತ್ (ಉತ್ತರ ಪ್ರದೇಶ): ಸೂಫಿ ಸಂತ ಶೇಖ್ ಬದ್ರುದ್ದೀನ್ ಶಾರ ದರ್ಗಾ ಹಾಗೂ ಸಮಾಧಿ ಇರುವ ಜಾಗವನ್ನು ಹಿಂದೂಗಳಿಗೆ ಸ್ಥಳಾಂತರಿಸುವಂತೆ ಬಾಘ್ಪತ್ ಜಿಲ್ಲಾ ನ್ಯಾಯಾಲಯವು ಮುಸ್ಲಿಮರಿಗೆ ಸೂಚಿಸಿದೆ. ಆ ಮೂಲಕ ದರ್ಗಾ ಇರುವ ಜಾಗದ ಒಡೆತನವನ್ನು ಪ್ರತಿಪಾದಿಸಿದ್ದ ಮುಸ್ಲಿಂ ಗುಂಪೊಂದರ ಅರ್ಜಿಯನ್ನು ವಜಾಗೊಳಿಸಿದೆ.

ಬಾಘ್ಪತ್ ಜಿಲ್ಲೆಯ ಬರ್ವಾನಾ ಗ್ರಾಮದಲ್ಲಿರುವ ಸೂಫಿ ಸಂತ ಬದ್ರುದ್ದೀನ್ ಶಾರ ದರ್ಗಾವು 600 ವರ್ಷಗಳಷ್ಟು ಪುರಾತನವಾದುದು ಎಂದು ನಂಬಲಾಗಿದೆ. ಆದರೆ, ಸುಮಾರು 53 ವರ್ಷಗಳ ಹಿಂದೆ, ಹಿಂದೂಗಳ ಗುಂಪೊಂದು ಈ ಜಾಗವನ್ನು ಪಾಂಡವರನ್ನು ಸುಟ್ಟು ಹಾಕಲು ದುರ್ಯೋಧನ ನಿರ್ಮಿಸಿದ್ದ ‘ಲಕ್ಷಗೃಹ’ ಎಂದು ಪ್ರತಿಪಾದಿಸುವ ಮೂಲಕ ವಿವಾದ ಸ್ಫೋಟಗೊಂಡಿತ್ತು.

1970ರಲ್ಲಿ ದರ್ಗಾದ ಉಸ್ತುವಾರಿಯಾಗಿದ್ದ ಮುಕೀಂ ಖಾನ್ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿ, ದರ್ಗಾದೊಳಗೆ ಹಿಂದೂ ಗುಂಪುಗಳು ಪ್ರವೇಶಿಸುವುದು ಹಾಗೂ ಪ್ರಾರ್ಥನೆ ಸಲ್ಲಿಸುವ ಪ್ರಯತ್ನಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. ಇದರೊಂದಿಗೆ ಜಾಗದ ಮಾಲಿಕತ್ವ ಹಾಗೂ ಹಿಂದೂಗಳ ಅತಿಕ್ರಮಣದಿಂದ ರಕ್ಷಣೆಯನ್ನೂ ಕೋರಿದ್ದ ಮುಕೀಂ ಖಾನ್, ಸಮಾಧಿಯ ಪಾವಿತ್ರ್ಯ ನಾಶವನ್ನು ತಡೆಯಬೇಕು ಹಾಗೂ ಸ್ಥಳದಲ್ಲಿ ಹವನ ನಡೆಸುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಬೇಕು ಎಂದೂ ಕೋರಿದ್ದರು. ನಂತರ ಈ ಪ್ರಕರಣವು ಮೀರತ್ ನ್ಯಾಯಾಲಯದಿಂದ ಬಾಘ್ಪತ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

ಐದು ದಶಕಗಳ ನಂತರ ಸದರಿ ಜಾಗವು ಲಕ್ಷಗೃಹ ಎಂದು ಇತ್ತೀಚಿನ ದಿನಗಳಲ್ಲಿ ಪ್ರತಿಪಾದಿಸುತ್ತಿದ್ದ ಹಿಂದೂ ರಾಷ್ಟ್ರೀಯವಾದಿಗಳ ವಾದವನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ. 1920ರಲ್ಲಿ ಈ ಜಾಗವು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗಿತ್ತೊ ಅಥವಾ ಸಮಾಧಿ ಸ್ಥಳ ಎಂದು ಪರಿಗಣಿತವಾಗಿತ್ತೊ ಎಂಬ ತಾಂತ್ರಿಕ ಲೋಪವೊಂದನ್ನು ಮುಸ್ಲಿಂ ಗುಂಪು ನಿರೂಪಿಸಲು ವಿಫಲಗೊಂಡಿದೆ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿತು.

ಈ ಕುರಿತು ಪ್ರತಿಕ್ರಿಯಿಸಿರುವ ಮುಸ್ಲಿಂ ಗುಂಪಿನ ಪರ ವಕೀಲ ಶಾಹೀದ್ ಖಾನ್, ಈ ಪ್ರಕರಣವನ್ನು ಉನ್ನತ ನ್ಯಾಯಾಲಯಕ್ಕೆ ಒಯ್ಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News