ಉತ್ತರ ಪ್ರದೇಶ | ವಾರಣಾಸಿ ಕಾಲೇಜು ಕ್ಯಾಂಪಸ್ ಒಳಗಿರುವ ಮಸೀದಿಯಲ್ಲಿ ಪ್ರಾರ್ಥನೆ ; ಉದ್ವಿಗ್ನ
ಲಕ್ನೋ : ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಉದಯ್ ಪ್ರತಾಪ್ ಪದವಿ ಕಾಲೇಜಿನ ಕ್ಯಾಂಪಸ್ ಒಳಗಡೆ ಇರುವ ಮಸೀದಿಯಲ್ಲಿ ದೊಡ್ಡ ಸಂಖ್ಯೆಯ ಜನರು ಪ್ರಾರ್ಥನೆ ಸಲ್ಲಿಸಿದ ಬಳಿಕ ಮಂಗಳವಾರ ಹಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದರಿಂದ ಉದ್ವಿಗ್ನತೆ ಸೃಷ್ಟಿಯಾಗಿದೆ.
ಪ್ರತಿಭಟನೆ ಸಂದರ್ಭ ಶಾಂತಿ ಕದಡಿದ ಆರೋಪದಲ್ಲಿ 7 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಸೀದಿಯೊಂದರ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದ ಕುರಿತಂತೆ ನವೆಂಬರ್ 24ರಂದು ಸಂಭಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಕ್ಯಾಂಪಸ್‌ನ ಒಳಗಿನ ಮಸೀದಿಯು ಕಾಲೇಜಿನಲ್ಲಿ ಅಶಾಂತಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಭಲ್ ಹಿಂಸಾಚಾರದ ಹಿನ್ನೆಲೆಯಲ್ಲಿ ಉದಯ್ ಪ್ರತಾಪ್ ಪದವಿ ಕಾಲೇಜಿನ ಕ್ಯಾಂಪಸ್ ಒಳಗೆ ಇರುವ ಮಸೀದಿ ಕುರಿತು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ 2018ರಲ್ಲಿ ಜಾರಿಗೊಳಿಸಿದ ನೋಟಿಸ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಯಿತು.
ವಸೀಮ್ ಅಹ್ಮದ್ ಎಂಬ ವ್ಯಕ್ತಿ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ವಕ್ಫ್ ಮಂಡಳಿ 2018ರಲ್ಲಿ ಕಾಲೇಜಿನ ಮ್ಯಾನೇಜರ್‌ಗೆ ನೋಟಿಸು ರವಾನಿಸಿ ಪ್ರತಿಕ್ರಿಯೆ ಕೋರಿತ್ತು. ಆದರೆ, ಕಾಲೇಜು, ಈ ಭೂಮಿಗೆ ಸಂಬಂಧಿಸಿ ವಕ್ಫ್ ಮಂಡಳಿಯೊಂದಿಗೆ ಯಾವುದೇ ವ್ಯಾಜ್ಯ ಬಾಕಿ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು.
2018ರ ನೋಟಿಸ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ನವೆಂಬರ್ 29ರಂದು 600 ಮಂದಿ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಲೇಜಿನ ಹಾಲಿ ಹಾಗೂ ಮಾಜಿ ವಿದ್ಯಾರ್ಥಿಗಳು ಮಂಗಳವಾರ ಕಾಲೇಜು ಕ್ಯಾಂಪಸ್‌ನ ಗೇಟಿನ ಮುಂದೆ ಸೇರಿ ಹನುಮಾನ ಚಾಲೀಸ್ ಪಠಿಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮಸೀದಿಯತ್ತ ತೆರಳದಂತೆ ಅವರು ತಡೆ ಒಡ್ಡಿದ್ದರು. ಅನಂತರ 7 ಮಾಜಿ ವಿದ್ಯಾರ್ಥಿಗಳು ಹಾಗೂ ಹಾಲಿ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅನಂತರ ಅವರನ್ನು ಅದೇ ದಿನ ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಮಸೀದಿ ದೀರ್ಘ ಕಾಲದಿಂದ ಇಲ್ಲಿದೆ. ಎರಡು ಬಾರಿ ನವೀಕರಣಗೊಂಡಿದೆ. 2012ರಲ್ಲಿ ನವೀಕರಣಗೊಂಡಿದೆ. ಆದರೂ ಈಗ ಯಾಕೆ ಮಸೀದಿಯ ಕುರಿತು ವಿವಾದ ಉಂಟಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಕಂದಾಯ ದಾಖಲೆಯ ಪ್ರಕಾರ ಸಂಪೂರ್ಣ ಭೂಮಿ ಉದಯ್ ಪ್ರತಾಪ್ ಕಾಲೇಜಿನೆ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಧರ್ಮೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.
ಕಾಲೇಜಿನ ಭೂಮಿಗೆ ಸಂಬಂಧಿಸಿ ತನ್ನ ಮುಂದೆ ಯಾವುದೇ ವ್ಯಾಜ್ಯ ಬಾಕಿ ಇಲ್ಲ ಎಂದು ಘೋಷಿಸಿದ ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಪತ್ರವನ್ನು ಅವರು ಉಲ್ಲೇಖಿಸಿದ್ದಾರೆ.