ಉತ್ತರ ಪ್ರದೇಶ.: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ, ಬಿಜೆಪಿ ಶಾಸಕ ದೋಷಿ
ಸೋನಭದ್ರ: ಒಂಭತ್ತು ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಉತ್ತರಪ್ರದೇಶದ ಸೋನಭದ್ರದ ದುದ್ಧಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ದುಲಾರ್ ಗೊಂಡ್ ನನ್ನು ದೋಷಿ ಎಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ಘೋಷಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಶಮುಲ್ಲಾಹ್ ಖಾನ್ ಅವರು ರಾಮ್ದುಲಾರ್ ಗೊಂಡ್ ದೋಷಿ ಎಂದು ಪರಿಗಣಿಸಿದ ಬಳಿಕ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಹಾಗೂ ಜೈಲಿಗೆ ಕಳುಹಿಸಲಾಯಿತು ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.
ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 15ರಂದು ಘೋಷಿಸಲಿದೆ ಎಂದು ಅದು ತಿಳಿಸಿದೆ. 2014ರಲ್ಲಿ ರಾಮ್ದುಲ್ ಗೊಂಡ್ ಅಪ್ರಾಪ್ತ ಬಾಲಕಿಯೋರ್ವಳ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2014 ನವೆಂಬರ್ 4ರಂದು ವ್ಯಕ್ತಿಯೋರ್ವ ಮುಯಿರ್ಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದ ಹಾಗೂ ಗೊಂಡ್ ತನ್ನ ಅಪ್ರಾಪ್ತ ಸಹೋದರಿಗೆ ಬೆದರಿಕೆ ಒಡ್ಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದ.
ಪೊಲೀಸರು ಗೊಂಡ್ ವಿರುದ್ಧ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ ಗಳು ಹಾಗೂ ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅನಂತರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಾದ-ಪ್ರತಿವಾದ ಡಿಸೆಂಬರ್ 8ರಂದು ಕೊನೆಗೊಂಡಿತ್ತು. ಅನಂತರ ನ್ಯಾಯಾಲಯ ತೀರ್ಪನ್ನು ಡಿಸೆಂಬರ್ 12ಕ್ಕೆ ಕಾಯ್ದಿರಿಸಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿದೆ.