ಚೆನ್ನೈ ರೋಡ್ ಶೋನಲ್ಲಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ
ಚೆನ್ನೈ : ಉತ್ತರಾಖಂಡದಲ್ಲಿ ಡಿ.8 ಹಾಗೂ 9ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಗುರುವಾರ ಆಯೋಜಿಸಲಾಗಿದ್ದ ರೋಡ್‌ಶೋದಲ್ಲಿ ಮುಖ್ಯಮಂತ್ರಿ ಪುಷ್ಕರ್‌ಸಿಂಗ್ ಧಾಮಿ ಭಾಗವಹಿಸಿದ್ದರು. ಈ ಸಂದರ್ಭ ಮುಖ್ಯಮಂತ್ರಿ ಧಾಮಿ ಅವರು ವಿವಿಧ ವಲಯಗಳ ಹೂಡಿಕೆದಾರರ ಜೊತೆ ಮಾತುಕತೆ ನಡೆಸಿದರು. ಸಂಪುಟ ಸಚಿವ ಸತ್ಪಾಲ್ ಮಹಾರಾಜ್ ಹಾಗೂ ಸಂಪುಟ ಸಚಿವ ಸೌರಭ್ ಬಹುಗುಣ ಅವರೂ ಪಾಲ್ಗೊಂಡಿದ್ದರು.
ಚೆನ್ನೈ ರೋಡ್ ಶೋನಲ್ಲಿ 10,150 ಕೋಟಿ ರೂ.ಗೂ ಅಧಿಕ ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಆರೋಗ್ಯಪಾಲನೆ, ಫಾರ್ಮಾ, ಇಂಧನ ವಲಯಕ್ಕೆ ಸಂಬಂಧಿಸಿದ ವಿವಿಧ ಕೈಗಾರಿಕೆಗಳನ್ನು ಅವು ಒಳಗೊಂಡಿವೆ.
ಸ್ಟಾರ್ಟಪ್, ಇಕ್ವೇಟರ್ ಉದ್ಯಮಗಳ ಹೂಡಿಕೆಗೆ ಸಂಬಂಧಿಸಿ ಜುಲೈ ವೆಂಚರ್ಸ್ ಜೊತೆ 1 ಸಾವಿರ ಕೋಟಿ ರೂ., ಆರೋಗ್ಯಪಾಲನಾ ಕ್ಷೇತ್ರದಲ್ಲಿನ ಹೂಡಿಕೆಗಾಗಿ ಕೃಷ್ಣಾ ಗ್ರೂಪ್ ಜೊತೆ 1 ಸಾವಿರ ಕೋ.ರೂ, ಉನ್ನತ ಶಿಕ್ಷಣದಲ್ಲಿ ಎಸ್‌ಆರ್‌ಎಂ ವಿವಿ ಜೊತೆ 600 ಕೋ.ರೂ., ಇಂಧನ ವಲಯದಲ್ಲಿ ರಿಫೆಕ್ಸ್ ಗ್ರೂಪ್ ಜೊತೆ 500 ಕೋ.ರೂ., ಆರೋಮಾ ಪಾರ್ಕ್ ನಿರ್ಮಾಣಕ್ಕಾಗಿ ಎನ್‌ಫ್ಲಾ ಮೊವಿ ಗ್ರೂಪ್‌ಜೆ ಜೊತೆ 250 ಕೋ.ರೂ, ಪ್ರವಾಸೋದ್ಯಮ ವಲಯದಲ್ಲಿ ಮಿಲ್ಟೆಕ್ಸ್ ಗ್ರೂಪ್‌ಜೊತೆ 100 ಕೋ.ರೂ. ಮೊತ್ತದ ಹೂಡಿಕೆಗಳಿಗೆ ಚೆನ್ನೈನ ರೋಡ್ ಶೋನ ಮೊದಲ ಕಲಾಪದಲ್ಲಿ ಸಹಿಹಾಕಲಾಯಿತು . ಎರಡನೆ ಕಲಾಪದಲ್ಲಿ 1 ಸಾವಿರ ಕೋ. ರೂ. ಮೊತ್ತದ ತಿಳುವಳಿಕಾ ಒಪ್ಪಂದಗಳಿಗೆ ಸಹಿಹಾಕಲಾಯಿತು.
ಆಪೊಲೋ ಆಸ್ಪತ್ರೆ ಜೊತೆ 500 ಕೋ. ರೂ., ಕ್ರಾಫ್ಟ್ ಸ್ಮಿತ್ ಇಂಡಿಯಾದೊಂದಿಗೆ 1 ಸಾವಿರ ಕೋ.ರೂ., ಇನ್‌ಫಿನಿಟಿ ಗ್ಲೋಬಲ್ ಜೊತೆ 4 ಸಾವಿರ ಕೋ. ರೂ. ಹಾಗೂ ಟಿಪಿಸಿಐ ಜೊತೆ 200 ಕೋ. ರೂ. ಮೌಲ್ಯದ ಹೂಡಿಕೆಗಳಿಗೆ ಸಹಿಹಾಕಲಾಯಿತು.
ಚೆನ್ನೈನ ರೋಡ್‌ಶೋಗೆ ಆಗಮಿಸಲಾದ ವಿವಿಧ ಉದ್ಯಮಸಮೂಹಗಳ ಹೂಡಿಕೆದಾರರನ್ನು ಡಿ.8 ಹಾಗೂ 9 ರಂದು ಡೆಹ್ರಾಡೂನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಆಹ್ವಾನ ನೀಡಿದರು. ತಮಿಳುನಾಡು ಹಾಗೂ ಉತ್ತರಾಖಂಡ ಇವೆರಡೂ ರಾಜ್ಯಗಳು ಪರಸ್ಪರ ಅಧ್ಯಾತ್ಮಿಕ ಬಂಧವನ್ನು ಹೊಂದಿರುವುದಾಗಿ ಅವರು ಹೇಳಿದರು.
ಉತ್ತರಾಖಂಡವು ವಿಶ್ವದರ್ಜೆಯ ಪ್ರವಾಸಿ ತಾಣವಾಗಿರುವ ಜೊತೆಗೆ, ಅಲ್ಲಿ ಆಹಾರ ಸಂಸ್ಕರಣೆ, ಆಟೋಮೊಬೈಲ್ ಸಾಮಾಗ್ರಿಗಳ ಉತ್ಪಾದನೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಂತಹ ಹಲವಾರು ವಲಯಗಳಲ್ಲಿ ಹೂಡಿಕೆಗೆ ಅಪಾರ ಅವಕಾಶಗಳಿರುವುದಾಗಿ ಧಾಮಿ ತಿಳಿಸಿದರು.
ಪ್ರಗತಿಗಾಗಿ ಶಾಂತಿ ಎಂಬ ಮೂಲಭೂತ ಮಂತ್ರದೊದಿಗೆ ಉತ್ತರಾಖಂಡ ರಾಜ್ಯವನ್ನು ಕ್ರಿಯಾತ್ಮಕ ಹಾಗೂ ಹೂಡಿಕೆ ಸ್ನೇಹಿ ರಾಜ್ಯವಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.
‘ಪ್ರಗತಿಗಾಗಿ ಶಾಂತಿ’ ಉತ್ತರಾಖಂಡದ ಹೂಡಿಕೆದಾರರ ಸಮಾವೇಶದ ಥೀಮ್ ಆಗಿರುವುದೆಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯದಲ್ಲಿ ಹೂಡಿಕೆಯ ಸಾಧ್ಯತೆಗಳ ಕುರಿತು ಹೂಡಿಕೆದಾರರಿಗೆ ಸಂಪುಟ ಸಚಿವರಾದ ಸತ್ಪಾಲ್ ಮಹಾರಾಜ್ ಹಾಗೂ ಸೌರಭ್ ಬಹುಗುಣ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಕಾರ್ಯದರ್ಶಿಗಳಾದ ಆರ್.ಮೀನಾಕ್ಷಿ ಸುಂದರಂ, ಸಚಿನ್ ಕುರ್ವೆ, ಡಾ. ಆರ್.ರಾಜೇಶ್ ಕುಮಾರ್, ಕೈಗಾರಿಕೆಗಳ ಮಹಾನಿರ್ದೇಶಕ ರೋಹಿತ್ ಮೀನಾ ಹಾಗೂ ವಿವಿಧ ವಲಯಗಳ ಹೂಡಿಕೆದಾರರು ಉಪಸ್ಥಿತರಿದ್ದರು.