ಉತ್ತರಾಖಂಡ: ಹೊರ ರಾಜ್ಯದವರು ಕೃಷಿ ಭೂಮಿ ಖರೀದಿಸುವಂತಿಲ್ಲ; ರಾಜ್ಯ ಸರ್ಕಾರ ಆದೇಶ

Update: 2024-01-02 03:09 GMT

Photo: twitter.com/pushkardhami

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹೊಸ ಭೂ ಕಾನೂನುಗಳ ಬಗ್ಗೆ ಅಧ್ಯಯನ ನಡೆಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇಮಿಸಿದ ಐದು ಮಂದಿಯ ಸಮಿತಿ ಅಂತಿಮ ವರದಿ ನೀಡುವವರೆಗೆ ರಾಜ್ಯದಲ್ಲಿ ಹೊರರಾಜ್ಯಗಳ ಜನತೆ ಕೃಷಿ ಮತ್ತು ತೋಟಗಾರಿಕೆ ಜಮೀನನ್ನು ಖರೀದಿಸದಂತೆ ನಿಷೇಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಾಜಿ ಮುಖ್ಯಕಾರ್ಯದರ್ಶಿ ಸುಭಾಷ್ ಕುಮಾರ್ ನೇತೃತ್ವದ ಸಮಿತಿ 2022ರಲ್ಲಿ ನೀಡಿರುವ 23 ಕರಡು ಶಿಫಾರಸ್ಸುಗಳ ಪರಾಮರ್ಶೆಗೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಧಾ ರತೂರಿ ನೇತೃತ್ವದ ಐದು ಮಂದಿಯ ಸಮಿತಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು.

ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ, ಆಡಳಿತ ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ಜಗದೀಶ್ ಕಂದಪಾಲ್ ಅವರು ಈ ಸಮಿತಿಯಲ್ಲಿದ್ದಾರೆ.

ರಾಜ್ಯದ ವಿವಿಧೆಡೆಗಳಲ್ಲಿ ಜನಸಾಮಾನ್ಯರನ್ನು ಭೇಟಿ ಮಾಡಿ ಅವರ ಜತೆ ಸಂವಾದ ನಡೆಸುವಂತೆ ಮತ್ತು ಅಂತಿಮ ಕರಡು ಸಿದ್ಧಪಡಿಸುವ ಮುನ್ನ ಸಲಹೆಗಳನ್ನು ಪಡೆಯುವಂತೆ ಭಾನುವಾರ ರಾತ್ರಿ ನಡೆದ ಸಭೆಯಲ್ಲಿ ಸಿಎಂ ಈ ಸಮಿತಿಗೆ ಸೂಚನೆ ನೀಡಿದ್ದಾರೆ. ಮುಂದಿನ ಆದೇಶದವರೆಗೆ ಹೊರಗಿನವರು ಉತ್ತರಾಖಂಡದಲ್ಲಿ ಕೃಷಿ ಹಾಗೂ ತೋಟಗಾರಿಕೆ ಉದ್ದೇಶಕ್ಕೆ ಭೂಮಿ ಖರೀದಿಸಲು ಅನುಮತಿ ನೀಡದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.

ಉತ್ತರಾಖಂಡದಲ್ಲಿ ಜನ ಖರೀದಿಸಿದ ಭೂಮಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕಳೆದ ವರ್ಷದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. "ರಾಜ್ಯದ ಹಿತಾಸಕ್ತಿಯಿಂದ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಉತ್ತರಾಖಂಡದ ಜನರ ಭಾವನೆಗಳಿಗೆ ಅನುಸಾರವಾಗಿ ರಾಜ್ಯ ಸರ್ಕಾರ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ" ಎಂದು ಪುಷ್ಕರ್ ಧಾಮಿ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News