ರಾಮದೇವ್ ಅವರ ಪತಂಜಲಿ ಆಯುರ್ವೇದ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಿರುವ ಉತ್ತರಾಖಂಡ: ವರದಿ
ಹೊಸದಿಲ್ಲಿ: ಪ್ರಧಾನಿ ಕಚೇರಿಯಿಂದ ನಿರ್ದೇಶನ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ತೀವ್ರ ಟೀಕೆಗಳ ಹೊರತಾಗಿಯೂ ಉತ್ತರಾಖಂಡದ ಪರವಾನಿಗೆ ಅಧಿಕಾರಿಗಳು ಆಯುಷ್ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದ ಕಾಯ್ದೆಯ ಪದೇ ಪದೇ ಉಲ್ಲಂಘನೆಗಾಗಿ ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಇನ್ನೂ ವಿಳಂಬಿಸುತ್ತಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಕೇರಳದ ನೇತ್ರತಜ್ಞ ಡಾ.ಕೆ.ವಿ.ಬಾಬು ಅವರು ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಮಾ.4ರಂದು ನೀಡಿರುವ ಉತ್ತರದಲ್ಲಿ ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಸೇವೆಗಳ ಪರವಾನಿಗೆ ಪ್ರಾಧಿಕಾರ(ಯುಎಸ್ಎಲ್ಎ)ವು, ತಪಾಸಣೆ ನಡೆಸುವಂತೆ ಮತ್ತು ಕ್ರಮವನ್ನು ತೆಗೆದುಕೊಳ್ಳುವಂತೆ ಹರಿದ್ವಾರದ ಡ್ರಗ್ ಇನ್ಸ್ಪೆಕ್ಟರ್ ಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದೆ.
ಆದಾಗ್ಯೂ, ಮಧುಮೇಹ, ಬೊಜ್ಜು, ಥೈರಾಯ್ಡ್ ಮತ್ತು ಹೃದ್ರೋಗಗಳಿಗೆ ತನ್ನ ಔಷಧಿಗಳ ಕುರಿತು ಪತಂಜಲಿಯ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಹೋರಾಡುತ್ತಿರುವ ಡಾ.ಬಾಬು ಅವರು ಪ್ರಾಧಿಕಾರದಿಂದ ಇಂತಹ ಉತ್ತರವನ್ನು ಸ್ವೀಕರಿಸಿದ್ದು ಇದೇ ಮೊದಲೇನಲ್ಲ. ಪ್ರಾಧಿಕಾರವು 2022 ಸೆ.3,2023 ಫೆ.2 ಮತ್ತು 2024 ಫೆ.12ರಂದು ಕೂಡ ಇದೇ ಉತ್ತರಗಳನ್ನು ನೀಡಿತ್ತು.
ದಾಖಲೆಗಳ ಪ್ರಕಾರ 2022ರಿಂದಲೂ ಈ ವಿಷಯದಲ್ಲಿ ಇದೇ ನಿರ್ದೇಶನವನ್ನು ನೀಡಲಾಗಿದೆ,ಆದರೆ ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದು ವಿಷಯವನ್ನೆಳೆಯಲು ವಿಳಂಬ ತಂತ್ರವಾಗಿರುವಂತಿದೆ. ಅವರು ಕಳೆದೆರಡು ವರ್ಷಗಳಿಂದಲೂ ಆಯುಷ್ ಸಚಿವಾಲಯವು ಬರೆದಿರುವ ಪತ್ರಗಳು ಮತ್ತು ನನ್ನ ದೂರುಗಳ ಮೇಲೆ ಪಟ್ಟಾಗಿ ಕುಳಿತುಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡಾ.ಬಾಬು ತಿಳಿಸಿದರು.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ,ಆಯುಷ್ ಸಚಿವಾಲಯ ಮತ್ತು ಯುಎಸ್ಎಲ್ಎ ಪತಂಜಲಿ ಆಯುರ್ವೇದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಡಾ.ಬಾಬು ಅವರು ಕಂಪನಿಯಿಂದ ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮೆಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ 1954ರ ಪದೇ ಪದೇ ಉಲ್ಲಂಘನೆ ಕುರಿತು ಜ.15ರಂದು ಪ್ರಧಾನಿ ಕಚೇರಿಗೆ ಪತ್ರವನ್ನು ಬರೆದಿದ್ದರು. ಪ್ರಧಾನಿ ಕಚೇರಿಯು ಸೂಕ್ತ ಕ್ರಮಕ್ಕಾಗಿ ಜ.24ರಂದು ಆಯುಷ್ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಬಳಿಕ ಆಯುಷ್ ಸಚಿವಾಲಯವು ದಿವ್ಯಾ ಫಾರ್ಮಸಿ (ಪತಂಜಲಿ)ಯಿಂದ ಕಾಯ್ದೆಯ ಉಲ್ಲಂಘನೆ ವಿಷಯವು ಯುಎಸ್ಎಲ್ಎ ಅಧಿಕಾರ ವ್ಯಾಪ್ತಿಗೆ ಬರುವುದರಿಂದ ಸೂಕ್ತ ಕ್ರಮವನ್ನು ಜರುಗಿಸುವಂತೆ ಅದಕ್ಕೆ ಸೂಚಿಸಿತ್ತು.
ಆದಾಗ್ಯೂ ಯುಎಸ್ಎಲ್ಎ ಡಾ.ಬಾಬು ಅವರಿಗೆ ಒಂದೇ ರೀತಿಯ ಉತ್ತರಗಳನ್ನು ನೀಡುತ್ತಿದೆ.
ಸರ್ವೋಚ್ಚ ನ್ಯಾಯಾಲಯವು ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತುಗಳಿಗಾಗಿ ಅದನ್ನು ಹಲವಾರು ಸಲ ತರಾಟೆಗೆತ್ತಿಕೊಂಡಿತ್ತು.