ಉತ್ತರಾಖಂಡ: ಏಕರೂಪದ ನಾಗರಿಕ ಸಂಹಿತೆ ಮಂಡನೆಗೆ ಶೀಘ್ರದಲ್ಲೇ ಅಧಿವೇಶನ

Update: 2023-11-11 16:32 GMT

Image tweeted by @pushkardhami

ಹೊಸದಿಲ್ಲಿ : ಉತ್ತರಾಖಂಡ ಸರಕಾರವು ಶೀಘ್ರದಲ್ಲೇ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಿದ್ದು, ಅದರಲ್ಲಿ ಏಕರೂಪದ ನಾಗರಿಕ ಸಂಹಿತೆಯ ಕರಡನ್ನು ಮಂಡಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಏಕರೂಪ ನಾಗರಿಕ ಸಂಹಿತೆಯ ಕರಡನ್ನು ತಯಾರಿಸಲು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಳೆದ ವರ್ಷ ಸಮಿತಿಯೊಂದನ್ನು ರಚಿಸಿದ್ದರು. ಸಮಾಜದ ವಿವಿಧ ಸ್ತರಗಳಿಗೆಸೇರಿದ ನಾಗರಿಕರೊಂದಿಗೆ ಸಮಿತಿಯು ಈ ಬಗ್ಗೆ ಚರ್ಚಿಸಿತ್ತು ಹಾಗೂ ರಾಜ್ಯದ ಎರಡು ಲಕ್ಷಕ್ಕೂ ಅಧಿಕ ಜನರು ಹಾಗೂ ಸಂಬಂಧಪಟ್ಟ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿತ್ತು.

ಏಕರೂಪ ನಾಗರಿಕ ಸಂಹಿತೆಯು ವಿವಾಹ, ವಿಚ್ಚೇದನ, ಉತ್ತರಾಧಿಕಾರ, ದತ್ತುಸ್ವೀಕಾರ, ವಂಶಪಾರಂಪರ್ಯ ಮತ್ತಿತರ ವೈಯಕ್ತಿಕ ವಿಷಯಗಳಲ್ಲಿ ಒಂದೇ ರೀತಿಯ ಕಾನೂನುಗಳನ್ನು ಎಲ್ಲಾ ನಾಗರಿಕರಿಗೆ ಅನ್ವಯಗೊಳಿಸುವ ಉದ್ದೇಶವನ್ನು ಹೊಂದಿದೆ ಹಾಗೂ ಅದು ಧರ್ಮಾಧಾರಿತವಾಗಿರುವುದಿಲ್ಲ ಎಂದು ರಾಜ್ಯ ಸರಕಾರದ ಮೂಲಗಳು ತಿಳಿಸಿವೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಸಲ್ಲಿಸಲಾಗುವ ಕರಡು ವಿಧೇಯಕದಲ್ಲಿ ಸರಕಾರವು ಬಹುಪತ್ನಿತ್ವದ ಮೇಲೆ ಸಂಪೂರ್ಣ ನಿಷೇಧ ಹೇರಲಿದೆ ಹಾಗೂ ಲಿವ್ ರಿಲೇಶನ್‌ಶಿಪ್‌ನ ನೋಂದಣಿಗೂ ಅವಕಾಶ ನೀಡಲಿದೆ ಎನ್ನಲಾಗಿದೆ.

ಕಳೆದ ವರ್ಷ ನಡೆದ ಉತ್ತರಾಖಂಡ ವಿಧಾನಸಭಾಚುನಾವಣೆಯತ ಸಂದರ್ಭದಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಆಶ್ವಾಸನೆಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಯೂ ಒಂದಾಗಿತ್ತು.

ಐದು ಸದಸ್ಯರ ಏಕರೂಪ ನಾಗರಿಕ ಸಂಹಿತೆ ಕರಡು ರಚನಾ ಸಮಿತಿಯ ಅವಧಿಯನ್ನು 2022ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ವಿಸ್ತರಿಸಲಾಗಿತ್ತು. ಆನಂತರ ಈ ವರ್ಷದ ಮೇ ತಿಂಗಳಲ್ಲಿ ಅದನ್ನು ಎರಡನೆ ಅವಧಿಗೆ ವಿಸ್ತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News