ಉತ್ತರಾಖಂಡ | ʼಕಾನೂನು ಬದ್ಧʼ ಎಂದು ಜಿಲ್ಲಾಡಳಿತ ಘೋಷಿಸಿದ್ದ ಉತ್ತರಕಾಶಿ ಮಸೀದಿಯನ್ನು ʼವಿವಾದಿತ ಸ್ಥಳʼ ಎಂದ ಸರಕಾರ

Update: 2024-12-01 11:48 GMT

ಸಾಂದರ್ಭಿಕ ಚಿತ್ರ | PC: hindustantimes

ಡೆಹ್ರಾಡೂನ್: ಉತ್ತರಕಾಶಿಯಲ್ಲಿನ ದಶಕಗಳಷ್ಟು ಹಳೆಯ ಮಸೀದಿಯು ಎಲ್ಲ ಮಾನ್ಯ ದಾಖಲೆಗಳೊಂದಿಗೆ ಕಾನೂನುಬದ್ಧವಾಗಿದೆ ಎಂದು ಈ ಹಿಂದೆ ಘೋಷಿಸಿದ್ದ ಜಿಲ್ಲಾಡಳಿತವು ಈಗ ತನ್ನ ನಿಲುವನ್ನು ಬದಲಿಸಿದೆ. ಮಸೀದಿಯು ‘ವಿವಾದಾತ್ಮಕ’ವಾಗಿದೆ ಎಂದು ಹೇಳಿರುವ ಅದು ಉತ್ತರಕಾಶಿ ಮಸೀದಿಯು ಅಕ್ರಮ ನಿರ್ಮಾಣವಾಗಿದೆ ಎಂದು ಪ್ರತಿಪಾದಿಸುತ್ತಿರುವ ಬಲಪಂಥೀಯ ಗುಂಪಿಗೆ ಈ ವಿಷಯದಲ್ಲಿ ಮಹಾಪಂಚಾಯತ್ ನಡೆಸಲು ಅನುಮತಿಯನ್ನು ನೀಡಿದೆ.

ಮಸೀದಿ ವಿಷಯ ಕುರಿತು ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿಯವರನ್ನು ಭೇಟಿಯಾಗಿದ್ದ ಬಲಪಂಥೀಯ ಗುಂಪಿನ ಸದಸ್ಯರ ಒತ್ತಾಯದ ಮೇರೆಗೆ ಎಸ್‌ಪಿ ಸೇರಿದಂತೆ ಅಧಿಕಾರಿಗಳ ಸರಣಿ ವರ್ಗಾವಣೆ ನಡೆದಿದೆ ಎಂಬ ಹೇಳಿಕೆಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ರವಿವಾರ ಮಸೀದಿಯಿಂದ ಸುಮಾರು 250 ಮೀ.ದೂರದಲ್ಲಿರುವ ರಾಮಲೀಲಾ ಮೈದಾನದಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿದ್ದು, ಅದರಲ್ಲಿ ಭಾಗಿಯಾಗುವವರು ದ್ವೇಷ ಭಾಷಣಗಳನ್ನು ಮಾಡಬಾರದು ಅಥವಾ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಯಾವುದೇ ಕೃತ್ಯದಲ್ಲಿ ತೊಡಗಬಾರದು, ಮಾರಕಾಸ್ತ್ರಗಳನ್ನು ಹೊಂದಿರಬಾರದು ಎಂಬಿತ್ಯಾದಿ ಷರತ್ತುಗಳ ಮೇಲೆ ಜಿಲ್ಲಾಡಳಿತವು ಮಹಾಪಂಚಾಯತ್‌ಗೆ ಅನುಮತಿ ನೀಡಿದೆ.

ದಶಕಗಳಿಂದಲೂ ಮಸೀದಿ ಸಮೀಪ ವಾಸವಾಗಿರುವ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಈ ಬೆಳವಣಿಗೆಗಳ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.

‘ನಾವು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು ಬಯಸಿದ್ದೇವೆ ’ ಎಂದು ಸ್ಥಳೀಯ ವ್ಯಾಪಾರಿಯೋರ್ವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News