ಸಿಬ್ಬಂದಿ ಕೊರತೆ, ಕಡಿಮೆ ವೇತನ, ಮೂಲಸೌಕರ್ಯಗಳ ಕೊರತೆ ಸರಣಿ ಸಮಸ್ಯೆಗಳಿಂದ ರೈಲ್ವೆ ಸಿಬ್ಬಂದಿ ಹೈರಾಣ: ಆರ್‌ಡಿಎಸ್‌ಓ ವರದಿ

Update: 2024-08-25 14:54 GMT

Photo : PTI

ಹೊಸದಿಲ್ಲಿ : ಆಕರ್ಷಕವಲ್ಲದ ವೇತನಶ್ರೇಣಿ, ಕೆಲಸದ ಒತ್ತಡದಿಂದಾಗಿ ಆರೋಗ್ಯದ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ವಿವಿಧ ರೀತಿಯ ಸವಾಲುಗಳನ್ನು ಸೆಕ್ಷನ್ ರೈಲು ನಿಯಂತ್ರಕರು ಎದುರಿಸುತ್ತಿದ್ದಾರೆಂದು ಸಂಶೋಧನಾ ವಿನ್ಯಾಸ ಹಾಗೂ ಮಾನದಂಡಗಳ ಸಂಘಟನೆ (ಆರ್‌ಡಿಎಸ್‌ಓ) ನಡೆಸಿದ ಅಧ್ಯಯನವರದಿಯೊಂದು ತಿಳಿಸಿದೆ.

ಆರ್‌ಡಿಎಸ್‌ಓ ರೈಲ್ವೆ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ.

ರೈಲು ನಿಯಂತ್ರಕರು (ಸೆಕ್ಷನ್ ಕಂಟ್ರೋಲರ್) ಭಾರೀ ಒತ್ತದ ಉದ್ಯೋಗವನ್ನು ನಿರ್ವಹಿಸುತ್ತಿದ್ದಾರೆ. ರೈಲು ನಿಯಂತ್ರಕ ಸಿಬ್ಬಂದಿಯ ಸಂಖ್ಯಾಬಲವು ಒಟ್ಟು ಸಾಮರ್ಥ್ಯದ ಶೇ.15-20ರಷ್ಟು ಮಾತ್ರವೇ ಇರುವುದು, ವೈದ್ಯಕೀಯವಾಗಿ ಅರ್ಹರಲ್ಲದ ಅಧಿಕಾರಿಗಳ ನಿಯೋಜನೆ ಹಾಗೂ ಹಣ ಅಥವಾ ಉದ್ಯೋಗದ ಭಡ್ತಿಯಂತಹ ಕೊಡುಗೆಗಳು ಇಲ್ಲದೆ ಇರುವುದು ಕೆಲಸದ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ವರದಿ ಹೇಳಿದೆ.

‘ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಭಾಗೀಯ ನಿಯಂತ್ರಕರು ಎದುರಿಸುತ್ತಿರುವ ಸವಾಲುಗಳು’ ಎಂಬ ಶೀರ್ಷಿಕೆಯ ಈ ಅಧ್ಯಯನ ವರದಿಯು ರೈಲ್ವೆ ನಿಯಂತ್ರಕರ ನೇಮಕಾತಿಯ ವಿಧಿವಿಧಾನಗಳು, ತರಬೇತಿ ಹಾಗೂ ರೈಲಿನ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವದಲ್ಲಿ ಸುಧಾರಣೆಗಳನ್ನು ಅನ್ವೇಷಿಸುವ ಉದ್ದೇಶವನ್ನು ಹೊಂದಿದೆ.

ಭಾರತೀಯ ರೈಲ್ವೆಯು ಜಗತ್ತಿನಲ್ಲೇ ಅತಿ ದೊಡ್ಡ ರೈಲ್ವೆ ಜಾಲವಾಗಿದೆ. ವಿವಿಧ ಸೆಕ್ಷನ್‌ಗಳ ಸುಮಾರು 1,05,555 ಕಿ.ಮೀ. ವಿಸ್ತೀರ್ಣದ ರೈಲು ಹಳಿಗಳಲ್ಲಿ ನಿತ್ಯವೂ ಸಾವಿರಾರು ರೈಲುಗಳು ಸಂಚರಿಸುತ್ತಿವೆ. ಈ ಬೃಹತ್ ಚಟುವಟಿಕೆಯನ್ನು ವಿಭಾಗೀಯ ನಿಯಂತ್ರಣ ಕಚೇರಿ ಎಂದು ಕರೆಯಲಾಗುವ ಭಾರತೀಯ ರೈಲು ಜಾಲದ 68 ಕಾರ್ಯನಿರ್ವಹಣಾ ಕೇಂದ್ರಗಳು ನಿಯಂತ್ರಿಸುತ್ತವೆ ಎಂದು ವರದಿ ಹೇಳಿದೆ.

ವಿಭಾಗೀಯ ಮುಖ್ಯ ಕಾರ್ಯಾಲಯಗಳಲ್ಲಿರುವ ವಿಭಾಗೀಯ ನಿಯಂತ್ರಣ ಕಚೇರಿಯು ರೈಲ್ವೆ ಜಾಲದ ಸಮಗ್ರ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವರದಿಯು ಬೆಟ್ಟು ಮಾಡಿ ತೋರಿಸಿದೆ.

ಸೆಕ್ಷನ್ ರೈಲು ನಿಯಂತ್ರಕರು ದಿನದ 24 ತಾಸುಗಳ ಕಾಲವೂ ಪಾಳಿಗಳಲ್ಲಿ ಕೆಲಸ ಮಾಡಬೇಕಾಗಿದೆಯಾದರೂ, ಈತನಕ ಕೇವಲ ಶೇ.15 ರಿಂದ 24 ಶೇ. ಸಿಬ್ಬಂದಿಯನ್ನು ಮಾತ್ರ ನೇಮಕ ಮಾಡಲಾಗಿದೆಯೆಂದು ವರದಿ ಹೇಳಿದೆ.

ಸೆಕ್ಷನ್ ಕಂಟ್ರೋಲರ್‌ಗಳ ಹುದ್ದೆಗೆ ರೈಲ್ವೆ ನೇಮಕಾತಿ ಮಂಡಳಿ ಮೂಲಕ ನೇರ ನೇಮಕಾತಿ ನಡೆಯಬೇಕೆಂದು ಅಧ್ಯಯನ ತಂಡವು ಸಲಹೆ ನೀಡಿದೆ.

ಸೆಕ್ಷನ್ ಕಂಟ್ರೋಲ್ ಕಚೇರಿಗಳಲ್ಲಿ ಜಲಶುದ್ದೀಕಾರಕಗಳು (ವಾಟರ್‌ಪ್ಯೂರಿಫೈಯರ್‌ಗಳು,), ಸ್ವಯಂಚಾಲಿತ ಕಾಫಿ/ಚಹಾ ವೆಂಡಿಂಗ್ ಯಂತ್ರಗಳು ಹಾಗೂ ವಿಶ್ರಾಂತಿ ಕೊಠಜಿಗಳು ಲಭ್ಯವಿಲ್ಲದೆ ಇರುವ ಬಗ್ಗೆ ವರದಿಯು ಗಮನಸೆಳೆದಿದೆ.

ಕೆಲಸದ ಒತ್ತಡದಿಂದಾಗಿ ಸೆಕ್ಷನ್ ನಿಯಂತ್ರಕರುಗಳು ರಕ್ತದೊತ್ತಡ, ಮಧುಮೇಹ ಅಥವಾ ಹೃದ್ರೋಗದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ. ಅವರ ಕ್ಷೇಮಕ್ಕಾಗಿ ಯೋಗ, ಧಾನ ಮತ್ತಿತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ವರದಿಯು ಶಿಫಾರಸು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News