ರಾಮ ಮಂದಿರ ಸಮಾರಂಭದಲ್ಲಿ ಭಾಗವಹಿಸದಂತೆ ಅಡ್ವಾಣಿ, ಜೋಶಿಗೆ ಮಂದಿರ ಟ್ರಸ್ಟ್ ಮನವಿ ಬೆನ್ನಲ್ಲೇ ಸಮಾರಂಭಕ್ಕೆ ಆಹ್ವಾನಿಸಿದ ವಿಹಿಂಪ, ಆರೆಸ್ಸೆಸ್

Update: 2023-12-20 05:58 GMT

Photo: ANI

ಹೊಸದಿಲ್ಲಿ: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ವಿಶ್ವ ಹಿಂದೂ ಪರಿಷತ್‌ ನಾಯಕ ಚಂಪತ್‌ ರಾಯ್‌ ಅವರು ಅಯ್ಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಎಲ್‌ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿ ಅವರಿಗೆ ಅವರ ವಯಸ್ಸಿನ ಕಾರಣ ಭಾಗವಹಿಸದಂತೆ ಮನವಿ ಮಾಡಿದ ಬೆನ್ನಲ್ಲೇ ಹಿರಿಯ ವಿಹಿಂಪ ಮತ್ತು ಆರೆಸ್ಸೆಸ್‌ ನಾಯಕರು ಅಡ್ವಾಣಿ ಹಾಗೂ ಜೋಷಿ ಅವರನ್ನು ಭೇಟಿಯಾಗಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ಧಾರೆ.

ವಿಹಿಂಪದ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಅವರು ಹಿರಿಯ ಆರೆಸ್ಸೆಸ್‌ ನಾಯಕರಾದ ರಾಮ್‌ ಲಾಲ್‌ ಮತ್ತು ಕೃಷ್ಣ ಗೋಪಾಲ್‌ ಅವರ ಜೊತೆಗೂಡಿ ಅಡ್ವಾಣಿ ಮತ್ತು ಜೋಶಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅವರಿಗೆ ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದ್ದಾರೆ. ಈ ಭೇಟಿಯ ಮರುದಿನ ಅದರ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ.

ರಾಮ ಮಂದಿರ ಆಂದೋಲನದಲ್ಲಿ ಅಡ್ವಾಣಿ ಮತ್ತು ಜೋಶಿ ಇಬ್ಬರೂ ಮುಂಚೂಣಿಯಲ್ಲಿದ್ದವರು.

ಅಡ್ವಾಣಿ ಮತ್ತು ಜೋಶಿ ಅವರನ್ನು ರಾಮ ಮಂದಿರದ ಪ್ರಾಣ ಪ್ರತಿಷ್ಠ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಬಗ್ಗೆ ಅಲೋಕ್‌ ಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಇಬ್ಬರು ನಾಯಕರನ್ನೂ ಇಡೀ ವಿಹಿಂಪ ಕುಟುಂಬದ ಪರವಾಗಿ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

“ಅಡ್ವಾಣೀಜಿ ಅವರ ಪುತ್ರಿ ಅಡ್ವಾಣಿ ಅವರ ಪ್ರಯಾಣ ಸೌಕರ್ಯಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರಿಂದ ಅವರಿಗೆ ಅನುಕೂಲಕರವಾಗುವ ರೀತಿಯಲ್ಲಿ ಎಲ್ಲಾ ಏರ್ಪಾಟುಗಳನ್ನು ವಿಹಿಂಪ ಮಾಡಲಿದೆ. ಅವರು ಬರಲು ತಮ್ಮಿಂದಾದಷ್ಟು ಪ್ರಯತ್ನಿಸಲಿದ್ದಾರೆ,” ಎಂದು ಅಲೋಕ್‌ ಕುಮಾರ್‌ ಹೇಳಿದರು.

ಕಾಂಗ್ರೆಸ್‌ ಪಕ್ಷದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್‌ ರಂಜನ್‌ ಚೌಧುರಿ ಸಹಿತ ಎಲ್ಲಾ ವಿಪಕ್ಷ ನಾಯಕರನ್ನೂ ಆಹ್ವಾನಿಸಲಾಗುವುದು ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News