ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ| ಸಂತ್ರಸ್ತ ಮಹಿಳೆಯರು ಈಗ ದೂರು ನೀಡಲು ಮುಂದೆ ಬನ್ನಿ: ಡಾ.ಜಿ. ಪರಮೇಶ್ವರ್
ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿದ್ದು, ಸಂತ್ರಸ್ತ ಮಹಿಳೆಯರು ಈಗ ದೂರು ನೀಡಲು ಬನ್ನಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಬಂಧನವಾಗಲು ತಡವಾಗಿದ್ದರಿಂದ ಸಾಕಷ್ಟು ಸಂತ್ರಸ್ತೆಯರು ದೂರು ಕೊಡಲು ಮುಂದೆ ಬಂದಿರಲಿಲ್ಲ. ಈಗ ಪ್ರಜ್ವಲ್ ಬಂಧನವಾಗಿದೆ. ಯಾರಿಗೆ ತೊಂದರೆ ಆಗಿದೆ ಅವರು ಪೊಲೀಸರ ಮುಂದೆ ಬಂದು ದೂರು ಕೊಡಬಹುದು ಎಂದರು.
ದೂರು ನೀಡಿದ ಮಹಿಳೆಯರಿಗೆ ಎಲ್ಲ ರೀತಿಯ ರಕ್ಷಣೆ ಕೊಡುತ್ತೇವೆ ಎಂಬುದನ್ನು ಹೇಳಿದ್ದೇವೆ ಎಂದ ಅವರು, ಪ್ರಜ್ವಲ್ ಮೊಬೈಲ್ ಕಳೆದಿದೆ, ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಎಸ್‌ಐಟಿ ತನಿಖಾಧಿಕಾರಿಗಳು ಆ ಮಾತನ್ನು ಹೇಳಿದರೆ ಒಪ್ಪಿಕೊಳ್ಳುತ್ತೇನೆ. ಬೇರೆಬೇರೆ ಮೂಲಗಳಿಂದ ಬರುವ ಮಾಹಿತಿಯನ್ನು ಒಪ್ಪಲು ಆಗುವುದಿಲ್ಲ ಎಂದು ತಿಳಿಸಿದರು.
ಪ್ರಜ್ವಲ್ ಬಂಧನ ಪ್ರಕ್ರಿಯೆ ವಿಳಂಬದ ಕುರಿತು ಪ್ರತಿಕ್ರಿಯಿಸಿ, ಪ್ರಜ್ವಲ್ ನಮ್ಮ ದೇಶದಲ್ಲಿ ಅಥವಾ ಯಾವದಾದರು ರಾಜ್ಯದಲ್ಲಿದ್ದರು, ಸಹ ನಮ್ಮ ತಂಡವನ್ನು ಕಳುಹಿಸಿ ಕರೆದುಕೊಂಡು ಬರಬಹುದಿತ್ತು. ಹೊರ ದೇಶದಲ್ಲಿದ್ದ ಕಾರಣಕ್ಕಾಗಿ, ಬಂಧಿಸಲು ಅದಕ್ಕೆ ಆದಂತಹ ಪ್ರಕ್ರಿಯೆಗಳಿವೆ. ಇಲ್ಲಿಂದ ನಾಲ್ಕು ಜನ ಇನ್ಸ್ ಪೆಕ್ಟರ್ ಗಳನ್ನು ಅಥವಾ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಎತ್ತಾಕಿಕೊಂಡು ಬನ್ನಿ ಎಂದು ಹೇಳೋಕೆ ಆಗಲ್ಲ ಎಂದು ತಿಳಿಸಿದರು.