ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಇಂಟರ್ನೆಟ್ ನಿಷೇಧ ವಿಸ್ತರಣೆ
ಇಂಫಾಲ: ರಾಜ್ಯದಲ್ಲಿ ಮಂಗಳವಾರ ಹೊಸದಾಗಿ ಹಿಂಸಾಚಾರ ಸಂಭವಿಸಿದ ಬಳಿಕ ಮಣಿಪುರ ಸರಕಾರವು ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ನ.5ರವರೆಗೆ ವಿಸ್ತರಿಸಿದೆ.
ಒಂದು ವಾರದ ಅವಧಿಯಲ್ಲಿ ಇದು ಎರಡನೇ ಮೊಬೈಲ್ ಇಂಟರ್ನೆಟ್ ನಿಷೇಧ ವಿಸ್ತರಣೆಯಾಗಿದೆ. ಮುಂಬರುವ ದಿನಗಳಲ್ಲಿ ಸರಕಾರವು ಇಂಟರ್ನೆಟ್ ನಿಷೇಧವನ್ನು ಹಿಂದೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು ಇತ್ತೀಚಿಗಷ್ಟೇ ಸುಳಿವು ನೀಡಿದ್ದರು.
ಈ ಸಂಬಂಧ ಗೃಹ ಆಯುಕ್ತ ಟಿ.ರಂಜಿತ್ ಸಿಂಗ್ ಅವರು ಮಂಗಳವಾರ ಹೊರಡಿಸಿರುವ ಅಧಿಸೂಚನೆಯಲ್ಲಿ,ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾರ್ವಜನಿಕರಲ್ಲಿ ಭಾವೋದ್ರೇಕಗಳನ್ನು ಪ್ರಚೋದಿಸುವ ಚಿತ್ರಗಳು,ದ್ವೇಷ ಭಾಷಣಗಳು ಮತ್ತು ದ್ವೇಷ ವೀಡಿಯೊ ಸಂದೇಶಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸುವ ಆತಂಕವಿದ್ದು,ಇದು ರಾಜ್ಯದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ನಿಷೇಧವನ್ನು ನ.5ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ ನಡೆದಿದ್ದೇನು?
ಟೆಂಗ್‌ನೌಪಾಲ್ ಜಿಲ್ಲೆಯಲ್ಲಿನ ಇಂಫಾಲ-ಮೊರೆಹ್ ರಾಷ್ಟ್ರೀಯ ಹೆದ್ದಾರಿಯ ಸಿನಾಮ್ ಬಳಿ ಶಸ್ತ್ರಸಜ್ಜಿತ ಉಗ್ರಗಾಮಿಗಳಿಂದ ಪೋಲಿಸ್ ವಾಹನಗಳ ಸಾಲಿನ ಮೇಲೆ ಹೊಂಚು ದಾಳಿಯಲ್ಲಿ ಕನಿಷ್ಠ ಮೂವರು ಪೋಲಿಸರು ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು,ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಗಾಯಾಳುಗಳು ಮೊರೆಹ್ ಪಟ್ಟಣದಲ್ಲಿ ಉಗ್ರರಿಂದ ಉಪವಿಭಾಗ ಪೋಲಿಸ್ ಅಧಿಕಾರಿ ಚಿಂಗ್ತಮ್ ಆನಂದ ಅವರ ಹತ್ಯೆಯ ಬಳಿಕ ಹೆಚ್ಚಿನ ಬಂದೋಬಸ್‌ಗಾಗಿ ತೆರಳುತ್ತಿದ್ದ ಪೋಲಿಸ್ ಪಡೆಯ ಭಾಗವಾಗಿದ್ದರು.