ರಾಹುಲ್ ಗಾಂಧಿಯನ್ನು ಭೇಟಿಯಾಗಲು 10 ಕೆಜಿ ತೂಕ ಕಳೆದುಕೊಳ್ಳುವಂತೆ ಸೂಚಿಸಲಾಯಿತು: ಕಾಂಗ್ರೆಸ್‌ ಶಾಸಕ ಝೀಶನ್ ಸಿದ್ದೀಕಿ ಆರೋಪ

Update: 2024-02-23 06:51 GMT

ಝೀಶನ್ ಸಿದ್ದೀಕಿ (Photo: PTI)

ಮುಂಬೈ: ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷಗಿರಿಯಿಂದ ಕಿತ್ತು ಹಾಕಿದ ನಂತರ, ಪಕ್ಷದೊಳಗೆ ನನ್ನ ವಿರುದ್ಧ ತಾರತಮ್ಯವೆಸಗಲಾಗುತ್ತಿದೆ ಎಂದು ಶಾಸಕ ಹಾಗೂ ಬಾಬಾ ಸಿದ್ದೀಕಿಯವರ ಪುತ್ರ ಝೀಶನ್ ಸಿದ್ದೀಕಿ ಆರೋಪಿಸಿದ್ದಾರೆ. ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ನಾನೇನಾದರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕಿದ್ದರೆ 10 ಕೆಜಿ ತೂಕ ಕಳೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ತಂಡದ ಸದಸ್ಯರೊಬ್ಬರು ನನಗೆ ಸೂಚಿಸಿದ್ದರು ಎಂದು ಅವರು ದೂರಿದ್ದಾರೆ.

"ರಾಹುಲ್ ಗಾಂಧಿ ಉತ್ತಮ ನಾಯಕ. ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ‌. ಮಲ್ಲಿಕಾರ್ಜುನ ಖರ್ಗೆ ನನಗೆ ತಂದೆ ಸಮಾನ. ಆದರೆ, ಕೆಲವೊಮ್ಮೆ ಅವರ ಹಿರಿತನದ ಹೊರತಾಗಿಯೂ ಅವರ ಕೈಗಳು ಕಟ್ಟಿಕೊಂಡಿವೆ. ರಾಹುಲ್ ಗಾಂಧಿಯವರನ್ನು ಸುತ್ತುವರಿದಿರುವ ತಂಡವು ಪಕ್ಷವನ್ನು ನಾಶಗೊಳಿಸುತ್ತಿದೆ. ಅವರು ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬೇರೆ ಪಕ್ಷದಿಂದ ಸುಪಾರಿ ತೆಗೆದುಕೊಂಡಿರುವಂತೆ ಕಾಣುತ್ತಿದೆ" ಎಂದು ಝೀಶನ್ ಸಿದ್ದೀಕಿ ವಾಗ್ದಾಳಿ ನಡೆಸಿದ್ದಾರೆ.

"ನಾನು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ, ರಾಹುಲ್ ಗಾಂಧಿ ತಂಡದ ಸದಸ್ಯರೊಬ್ಬರು, "ಮೊದಲು 10 ಕೆಜಿ ತೂಕ ಕಡಿಮೆ ಮಾಡಿಕೊ. ಆಮೇಲೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿಸುತ್ತೇನೆ" ಎಂದು ಹೇಳಿದ್ದರು. ನಾನು ಶಾಸಕ ಮತ್ತು ಮಹಾರಾಷ್ಟ್ರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ. ನೀವು ಆಂಗಿಕ ನಿಂದನೆ ಮಾಡುತ್ತಿದ್ದೀರಾ? ಎಂದು ಅವರು ಕಿಡಿ ಕಾರಿದ್ದಾರೆ.

ಇದೇ ವೇಳೆ ತಮ್ಮನ್ನು ಯಾಕೆ ಮುಂಬೈ ಯುವ ಕಾಂಗ್ರೆಸ್ ಮುಖ್ಯಸ್ಥ ಹುದ್ದೆಯಿಂದ ತೆಗೆಯಲಾಯಿತು ಎಂಬ ಬಗ್ಗೆ ನನಗೆ ಯಾವುದೇ ಅಂದಾಜಿಲ್ಲ. ಈ ಕುರಿತು ಪಕ್ಷದ ಹಿರಿಯ ನಾಯಕತ್ವದಿಂದ ಯಾವುದೇ ಮಾತುಕತೆ ನಡೆಯಲಿಲ್ಲ. ಯಾವುದೇ ಕರೆಯೂ ಬರಲಿಲ್ಲ ಎಂದು ಝೀಶನ್ ಸಿದ್ದೀಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News