ವಯನಾಡು ಭೂಕುಸಿತದಲ್ಲಿ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದ ಯುವತಿಯ ಏಕೈಕ ಆಶ್ರಯವಾಗಿದ್ದ ಭಾವಿ ಪತಿಯೂ ಅಪಘಾತದಲ್ಲಿ ಮೃತ್ಯು
ಕೇರಳ: ವಯನಾಡ್ ಜಿಲ್ಲೆಯ ಯುವತಿ ಶ್ರುತಿ (24), ಇತ್ತೀಚಿನ ದುರಂತ ಭೂಕುಸಿತದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡು ಇನ್ನೂ ಚೇತರಿಸಿಕೊಳ್ಳುತ್ತಿದ್ದರು, ಆದರೆ ವಿಧಿ ಎನ್ನುವಂತೆ ದುರಂತದ ಬಳಿಕ ಆಕೆಯ ಏಕೈಕ ಆಶ್ರಯವಾಗಿದ್ದ ಭಾವಿ ಪತಿ ಕೂಡ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಮಂಗಳವಾರ ನಡೆದ ಅಪಘಾತದ ನಂತರ ಗಂಭೀರ ಸ್ಥಿತಿಯಲ್ಲಿದ್ದ 27 ವರ್ಷದ ಜೆನ್ಸನ್ ನಿಧನರಾಗಿದ್ದಾರೆ. ಈ ಬಗ್ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದ ಡಾ. ಮೂಪೆನ್ ವೈದ್ಯಕೀಯ ಕಾಲೇಜಿನ ವಕ್ತಾರರು ದೃಢಪಡಿಸಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಅಕೌಂಟೆಂಟ್ ಆಗಿರುವ ಶ್ರುತಿ ಜು.30ರಂದು ಮೆಪ್ಪಾಡಿ ಪಂಚಾಯತ್ ನ ಚೂರಲ್ಮಲಾ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತನ್ನ ಪೋಷಕರು ಮತ್ತು ಸಹೋದರಿ ಸೇರಿದಂತೆ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದರು. ಈ ವೇಳೆ ಅವರ ನಿಶ್ಚಿತ ವರ ಜೆನ್ಸನ್ ಅವರಿಗೆ ಏಕೈಕ ಆಶ್ರಯವಾಗಿದ್ದರು.
ಜೆನ್ಸನ್ ಜೊತೆಗಿನ 10 ವರ್ಷಗಳ ಪ್ರೀತಿಯ ಬಳಿಕ ಅವರಿಬ್ಬರು ಜೂ. 2ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೆನ್ಸನ್ ಕಾರು ವಾಷಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೆನ್ಸನ್ ಗೆ ಅಪಘಾತಕ್ಕೆ ಕೆಲವೇ ದಿನಗಳ ಮೊದಲು ಅಂದರೆ ಆ.29 ರಂದು ಭಾವಿ ದಂಪತಿಗಳು ಪುತ್ತುಮಲ ಧಪನ ಭೂಮಿಗೆ ಭೇಟಿ ನೀಡಿದ್ದರು. ಅಲ್ಲಿ ಶ್ರುತಿ ಅವರ ಕೆಲವು ಕುಟುಂಬ ಸದಸ್ಯರನ್ನು ಸಮಾಧಿ ಮಾಡಲಾಗಿತ್ತು. ಅಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಂತೆ ವಿವಾಹವಾಗುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದರು.
ಭೂಕುಸಿತ ದುರಂತಕ್ಕೆ ಮೊದಲು ಶ್ರುತಿ-ಜೆನ್ಸನ್ ಜೋಡಿ ಡಿಸೆಂಬರ್ ನಲ್ಲಿ ಅದ್ದೂರಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಬದಲಾದ ಸನ್ನಿವೇಶಗಳಿಂದ ಸೆಪ್ಟೆಂಬರ್ ನಲ್ಲಿ ಕೋರ್ಟ್ ನಲ್ಲಿ ನೋಂದಣಿ ಮೂಲಕ ಸರಳ ವಿವಾಹಕ್ಕೆ ನಿರ್ಧರಿಸಿದ್ದರು.
ಸೆ.10ರಂದು ಜೆನ್ಸನ್ ಪ್ರಯಾಣಿಸುತ್ತಿದ್ದ ಕಾರು ಖಾಸಗಿ ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದು ಜೆನ್ಸನ್ ತೀವ್ರವಾಗಿ ಗಾಯಗೊಂಡಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರುತಿ ಮತ್ತು ಜೆನ್ಸನ್ ಅವರ ಕುಟುಂಬದ ಇತರ ಸದಸ್ಯರಿಗೂ ಗಾಯಗಳಾಗಿತ್ತು. ಜೆನ್ಸನ್ ಅವರನ್ನು ಮೂಗು ಮತ್ತು ಮೆದುಳಿನ ರಕ್ತಸ್ರಾವ ಸೇರಿದಂತೆ ಗಂಭೀರ ಗಾಯಗಳಾಗಿದ್ದವು.
400ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ವಯನಾಡು ಭೂಕುಸಿತದಲ್ಲಿ ಶ್ರುತಿ ತನ್ನ ಮನೆ,4 ಲಕ್ಷ ರೂ. ನಗದು ಮತ್ತು ಅಂದಾಜು 15 ಪವನ್ ಚಿನ್ನವನ್ನು ಕಳೆದುಕೊಂಡಿದ್ದರು.
ಈ ಕುರಿತು ಫೇಸ್ ಬುಕ್ ಪೋಸ್ಟ್ ನಲ್ಲಿ ಶ್ರುತಿಗೆ ಸಂತಾಪ ಸೂಚಿಸಿದ ರಾಹುಲ್ ಗಾಂಧಿ, ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ಆಶ್ರಯ ನೀಡುತ್ತಿದ್ದ ಮೆಪ್ಪಾಡಿ ಶಿಬಿರಕ್ಕೆ ನಾವು ಭೇಟಿ ನೀಡಿದ ಸಂದರ್ಭದಲ್ಲಿ ಪ್ರಿಯಾಂಕಾ ಮತ್ತು ನಾನು, ಶ್ರುತಿ ಎಂಬ ಯುವತಿ ಬಗ್ಗೆ ಮತ್ತು ಅವರ ಸಹನಾಶಕ್ತಿಯ ಬಗ್ಗೆ ತಿಳಿದುಕೊಂಡೆವು.
ದುರಂತದಲ್ಲಿ ಹಲವಾರು ಕುಟುಂಬಸ್ಥರ ಕಳೆದುಕೊಂಡಿರುವ ಹೊರತಾಗಿಯೂ, ಶ್ರುತಿ ಧೈರ್ಯಶಾಲಿಯಾಗಿದ್ದರು. ಇಂದು ಶ್ರುತಿ ತನ್ನ ನಿಶ್ಚಿತ ವರ ಜೆನ್ಸನ್ ಅವರನ್ನು ಕಳೆದುಕೊಂಡು ಮತ್ತೊಂದು ಹೃದಯವಿದ್ರಾಹಕ ದುರಂತವನ್ನು ಎದುರಿಸಿದ್ದಾರೆ ಎಂದು ತಿಳಿಯಲು ನಾನು ತುಂಬಾ ದುಃಖಿತನಾಗಿದ್ದೇನೆ .
ಶ್ರುತಿ ಅವರಿಗೆ ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ನಾನು ಸಂತಾಪವನ್ನು ಸೂಚಿಸುತ್ತೇನೆ. ನಿಮ್ಮ ದುಃಖದಲ್ಲಿ ನೀವು ಒಬ್ಬಂಟಿಯಾಗಿಲ್ಲ. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂಬ ನಮ್ಮ ಪ್ರಾರ್ಥನೆಗಳು, ಹಾರೈಕೆಗಳು ನಿಮ್ಮೊಂದಿಗಿವೆ ಎಂದು ಹೇಳಿದ್ದಾರೆ.